ಕಾಪು: ಆಸ್ಕರ್ ಫೆರ್ನಾಂಡಿಸ್‌ರಿಗೆ ಅಭಿನಂದನೆ

ಕಾಪು, ಜೂ.14: ಕಾಂಗ್ರೆಸ್ ಪಕ್ಷದ ಇತಿಹಾಸ, ದೇಶಕ್ಕೆ ಕಾಂಗ್ರೆಸ್ ನೀಡಿದ ಕೊಡುಗೆ ಹಾಗೂ ಗಾಂಧಿ ಕುಟುಂಬದ ತ್ಯಾಗಗಳನ್ನು ಯುವ ಜನರಿಗೆ ತಿಳಿಯ ಪಡಿಸುವ ಕೆಲಸ ಪಕ್ಷದ ಕಾರ್ಯಕರ್ತರು ಮತ್ತು ನಾಯಕರಿಂದ ನಡೆಯಬೇಕಿದೆ ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದರು.
ಅವರು ಸೋಮವಾರ ಕಾಪು ಬ್ಲಾಕ್ ಕಾಂಗ್ರೆಸ್‌ನ ವತಿಯಿಂದ ಕಾಪು ರಾಜೀವ ಭವನದಲ್ಲಿ ಆಯೋಜಿಸಲಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಸಮ್ಮಾನ ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.
ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರುವ ಮೊದಲು ಆಕಾಶವನ್ನೇ ತಂದು ಅಂಗೈಯಲ್ಲಿ ಇಡ್ತೇವೆ ಎಂಬ ಭರವಸೆಯನ್ನು ಮತದಾರರಿಗೆ ನೀಡಿತ್ತು. ಆದರೆ ಎಲ್ಲದಕ್ಕೂ ಬೆಲೆಯೇರಿಕೆ ಮಾಡುವ ಮೂಲಕ ಜನರು ತನ್ನ ದಿನಗಳೆಯಲು ಆಕಾಶದತ್ತ ಮುಖಮಾಡಿ ನೋಡಬೇಕಾದ ಅನಿವಾರ್ಯತೆಗೆ ಸಿಲುಕಿಸಿದೆ ಎಂದು ಅವರು ಮೋದಿ ಸರಕಾರದ ಕಾರ್ಯ ವೈಖರಿಯ ಬಗ್ಗೆ ಟೀಕಿಸಿದರು.
ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಕಾಪು ಹಿಂದಿನಿಂದಲೂ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಅದನ್ನು ಉಳಿಸಿಕೊಂಡು ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ನಾವೆಲ್ಲರೂ ಶ್ರಮವಹಿಸಬೇಕು. ಪಕ್ಷದೊಳಗೆ ಎಲ್ಲರೂ ಒಂದಾಗಿ ಕೆಲಸ ಮಾಡಿದಲ್ಲಿ ಕೈ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳಲು ಸಾಧ್ಯ ಎಂದರು.
ಯುವಜನ ಸೇವೆ ಮತ್ತು ಮೀನುಗಾರಿಕಾ ಸಚಿವ ಅಯಚಂದ್ರ ಜೈನ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ, ಮಾಜಿ ಶಾಸಕ ಯು.ಆರ್. ಸಭಾಪತಿ, ಬ್ಲೋಸಮ್ ಫೆರ್ನಾಂಡಿಸ್, ಕೆಪಿಸಿಸಿ ಕಾರ್ಯದರ್ಶಿ ಎಂ. ಎ. ಗಫೂರ್, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಜೆ. ಶೆಟ್ಟಿ, ಕಾಪು ಪುರಸಭೆಯ ಅಧ್ಯಕ್ಷೆ ಸೌಮ್ಯಾ ಎಸ್., ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನರಸಿಂಹ ಮೂರ್ತಿ, ಪಕ್ಷದ ಮುಖಂಡರಾದ ಕಾಪು ದಿವಾಕರ ಶೆಟ್ಟಿ, ಅಶೋಕ್ ಕುಮಾರ್ ಕೊಡವೂರು, ಸರಸು ಬಂಗೇರ, ಶ್ರೆಕರ ಸುವರ್ಣ, ವಿನಯ ಬಲ್ಲಾಳ್, ವೈ. ಸುಕುಮಾರ್, ದೀಪಕ್ ಕುಮಾರ್ ಎರ್ಮಾಳ್, ವೈ. ಗಂಗಾಧರ ಸುವರ್ಣ, ಸುನೀಲ್ ಬಂಗೇರ, ವಿಶ್ವಾಸ್ ಅಮೀನ್, ಕೇಶವ ಹೆಜಮಾಡಿ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಕಾಪು ಪುರಸಭೆಯ ಸದಸ್ಯರು ಉಪಸ್ಥಿತರಿದ್ದರು.







