ಸೌದಿ ಗ್ರೀನ್ ಕಾರ್ಡ್‌ಗೆ ಯಾರು ಅರ್ಹರು, ಯಾರು ಅಲ್ಲ? : ಇಲ್ಲಿದೆ ಮಾಹಿತಿ

ಜಿದ್ದಾ, ಜೂ. 14: ಸೌದಿ ಗ್ರೀನ್ ಕಾರ್ಡನ್ನು ವಿದೇಶಿ ಹೂಡಿಕೆದಾರರು ಮತ್ತು ಅತ್ಯುನ್ನತ ಅರ್ಹತೆ ಹೊಂದಿರುವ ವಲಸಿಗರಿಗೆ ಮಾತ್ರ ನೀಡಲಾಗುವುದು ಎಂದು ಶೂರ ಕೌನ್ಸಿಲ್‌ನ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಖಾಯಂ ವಾಸ್ತವ್ಯ ಕಾರ್ಡ್ ನೀಡುವ ವಿಧಿವಿಧಾನಗಳ ಬಗ್ಗೆ ಹಲವಾರು ಸಚಿವಾಲಯಗಳು ಅಧ್ಯಯನ ನಡೆಸುತ್ತಿವೆ ಹಾಗೂ ನಿಯಮಾವಳಿಗಳನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದರು.
ವಲಸಿಗ ಸಮುದಾಯದಲ್ಲಿರುವ ಪರಿಣತರು ಸೃಷ್ಟಿಸಿದ ಆರ್ಥಿಕ ಪ್ರಯೋಜನಗಳನ್ನು ಕೊಯಿಲು ಮಾಡಲು ಸೌದಿ ಅರೇಬಿಯ ಎದುರು ನೋಡುತ್ತಿದೆ ಎಂದು ‘ಅರಬ್ ನ್ಯೂಸ್’ನೊಂದಿಗೆ ಮಾತನಾಡಿದ ಶೂರ ಕೌನ್ಸಿಲ್‌ನ ಆರ್ಥಿಕ ಸಮಿತಿಯ ಉಪಾಧ್ಯಕ್ಷ ಫಾಹದ್ ಬಿನ್ ಜುಮಾ ತಿಳಿಸಿದರು.
ಸೌದಿ ಅರೇಬಿಯದಲ್ಲಿ ಖಾಯಂ ಆಗಿ ನೆಲೆಸಲು ಅವಕಾಶ ಮಾಡಿಕೊಡುವ ಈ ಗ್ರೀನ್ ಕಾರ್ಡನ್ನು ಹೆಚ್ಚಿನ ವಲಸಿಗರು ಅಪೇಕ್ಷಿಸುತ್ತಿದ್ದಾರೆ.
‘‘ನೂತನ ವ್ಯವಸ್ಥೆಯು ಅಮೆರಿಕದ ವಾಸ್ತವ್ಯ ಮಾದರಿಯ ಹಾಗೆ ಇರುತ್ತದೆ. ವಿದೇಶಿ ಹೂಡಿಕೆದಾರರು ಮತ್ತು ಅಸಾಧಾರಣ ವಲಸಿಗರ ಪ್ರಯೋಜನವನ್ನು ಪಡೆಯಲು ಸೌದಿ ಅರೇಬಿಯ ಉತ್ಸುಕವಾಗಿದೆ’’ ಎಂದು ಬಿನ್ ಜುಮಾ ತಿಳಿಸಿದರು.
‘‘ಗ್ರೀನ್ ಕಾರ್ಡ್ ಸೌದಿ ಅರೇಬಿಯಕ್ಕೆ ವಿದೇಶಿ ಹೂಡಿಕೆಯನ್ನು ಆಕರ್ಷಿಸುತ್ತದೆ. ನೂತನ ಕಾರ್ಯಕ್ರಮದ ಪ್ರಯೋಜನವನ್ನು ಹೆಚ್ಚಿನ ವಲಸಿಗರು ಪಡೆದುಕೊಳ್ಳಲಿದ್ದಾರೆ. ಅದೇ ವೇಳೆ, ಗ್ರೀನ್ ಕಾರ್ಡ್ ಪಡೆಯಲು ವಲಸಿಗರು ನೀಡುವ ಶುಲ್ಕದ ಪ್ರಯೋಜನವನ್ನು ಸೌದಿ ಅರೇಬಿಯ ಪಡೆಯಲಿದೆ’’ ಎಂದರು.
ವಲಸಿಗರು ತಮ್ಮ ದೇಶಗಳಿಗೆ ಕಳುಹಿಸುವ ಹಣದ ಉಳಿತಾಯ ಹಾಗೂ ಇತರ ರೂಪಗಳಿಂದ ನೂತನ ಕಾರ್ಯಕ್ರಮವು ವಾರ್ಷಿಕ 10 ಬಿಲಿಯ ಡಾಲರ್ ಸೃಷ್ಟಿಸುತ್ತದೆ ಎಂದು ಅಂದಾಜಿಸಲಾಗಿದೆ. ಅದರ ಜೊತೆಗೆ, ವಿದೇಶಿ ಹೂಡಿಕೆಯ ರೂಪದಲ್ಲಿ ಬಿಲಿಯಗಟ್ಟಳೆ ಡಾಲರ್ ಸೌದಿಗೆ ಬರುತ್ತದೆ.
ಈ ಯೋಜನೆಯು ಈಗ ಅಸ್ತಿತ್ವದಲ್ಲಿರುವ ಸ್ಪಾನ್ಸರ್‌ಶಿಪ್ ವ್ಯವಸ್ಥೆಯನ್ನು ರದ್ದುಪಡಿಸುತ್ತದೆ.
ಗ್ರೀನ್ ಕಾರ್ಡ್ ಹೊಂದಿದವರು ಸೌದಿ ಅರೇಬಿಯದಲ್ಲಿ ಆಸ್ತಿ ಹೊಂದಬಹುದು ಹಾಗೂ ವಾಣಿಜ್ಯ ಚಟುವಟಿಕೆಗಳನ್ನು ನಡೆಸಬಹುದಾಗಿದೆ.
ಸೌದಿ ಅರೇಬಿಯದಲ್ಲಿ ಒಂದು ಕೋಟಿಗೂ ಅಧಿಕ ವಿದೇಶಿ ಕೆಲಸಗಾರರಿದ್ದಾರೆ.







