ರಕ್ತದಾನದಿಂದ ಸಾಮಾಜಿಕ ಸಾಮರಸ್ಯ ಹೆಚ್ಚಳ: ಡಾ.ರಾಜೇಂದ್ರ ಕೆ.ವಿ.
ಪುತ್ತೂರಿನಲ್ಲಿ ವಿಶ್ವ ರಕ್ತದಾನ ದಿನಾಚರಣೆ

ಪುತ್ತೂರು, ಜೂ. 14: ರಕ್ತದಾನ ಮಾಡುವುದು ಸಮಾಜದಲ್ಲಿ ಸಾಮರಸ್ಯ ಹೆಚ್ಚಾಗಲು ಕಾರಣವಾಗಿದ್ದು, ಇನ್ನೊಬ್ಬರ ನೋವಿಗೆ ಸ್ಪಂದಿಸುವ ಮಹತ್ಕಾರ್ಯವಾಗಿದೆ ಎಂದು ಪುತ್ತೂರು ಉಪವಿಭಾಗಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೇಳಿದರು.
ವಿಶ್ವ ರಕ್ತದಾನ ದಿನದ ಅಂಗವಾಗಿ ನಗರದ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್‌ನಲ್ಲಿ ರೋಟರಿ ಕ್ಲಬ್ ಪುತ್ತೂರು, ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ, ಇನ್ನರ್‌ವೀಲ್ ಕ್ಲಬ್ ಹಾಗೂ ಪುತ್ತೂರು ಹವ್ಯಕ ವಲಯದ ಸಹಯೋಗದಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು.
ಪರಸ್ಪರ ಬಾಂಧವ್ಯ, ಪ್ರೀತಿ-ವಿಶ್ವಾಸವಿದ್ದಾಗ ಸ್ವಸ್ಥ ಸಮಾಜ ನಿರ್ಮಾಣವಾಗಲು ಸಾಧ್ಯ. ಆರೋಗ್ಯಪೂರ್ಣ ಸಮಾಜವನ್ನು ಬೆಳೆಸುವ ಮಹತ್ವದ ಜವಾಬ್ದಾರಿ ಯುವ ಸಮುದಾಯದ ಹಾಗೂ ಸಂಘಟನೆಗಳ ಮೇಲಿದೆ. ಏಕ ಮನಸ್ಸಿನ ಪ್ರಗತಿ ಮಾತ್ರದ ಚಿಂತನೆ ಸಮಾಜವನ್ನು ಬೆಳೆಸುತ್ತದೆ. ಈ ನಿಟ್ಟಿನಲ್ಲಿ ಸಮಾಜಮುಖಿ ಚಟುವಟಿಕೆಗಳಲ್ಲಿ ಪ್ರತಿಯೊಬ್ಬರು ಕೈಜೋಡಿಸಿ ಮುಂದುವರಿಯಬೇಕು ಎಂದು ಹೇಳಿದರು.
ಪುತ್ತೂರು ತಹಶೀಲ್ದಾರ್ ಪುಟ್ಟ ಶೆಟ್ಟಿ ಮಾತನಾಡಿ ಸಮಾಜದ ಪ್ರತಿಯೊಬ್ಬರಿಗೂ ಜವಾಬ್ದಾರಿ ಇದೆ. ಕಷ್ಟದಲ್ಲಿರುವವರಿಗೆ ನೆರವಾಗುವ ಮಾನವೀಯ ಗುಣವನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಹಲವು ಮನಸ್ಸುಗಳು ಸೇರಿದಾಗ ಜಟಿಲ ಸಮಸ್ಯೆಗಳನ್ನೂ ದೂರ ಮಾಡುವ ಮಾರ್ಗ ಸುಲ ಸಾಧ್ಯವಾಗುತ್ತದೆ ಎಂದರು.
ಕ್ಯಾಂಪ್ಕೋ ಚಾಕಲೇಟು ಕಾರ್ಖಾನೆಯ ಸಹಾಯಕ ಜನರಲ್ ಮ್ಯಾನೇಜರ್ ಫ್ರಾನ್ಸಿಸ್ ಡಿಸೋಜ ಶುಭ ಹಾರೈಸಿದರು.
ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್‌ನ ವೈದ್ಯಾಧಿಕಾರಿ ಡಾ.ರಾಮಚಂದ್ರ ಭಟ್ ರಕ್ತದಾನದ ಕುರಿತು ಮಾಹಿತಿ ನೀಡಿದರು.
ರೋಟರಿ ಕ್ಲಬ್ ಪುತ್ತೂರು ಅಧ್ಯಕ್ಷ ಎಂ.ಜಿ. ರಫೀಕ್, ಡಾ. ಅಶೋಕ್ ಪಡಿವಾಳ್, ರೆಡ್‌ಕ್ರಾಸ್ ಸೊಸೈಟಿ ಅಧ್ಯಕ್ಷ ಆಸ್ಕರ್ ಆನಂದ್, ಇನ್ನರ್‌ವೀಲ್ ಅಧ್ಯಕ್ಷೆ ಶಂಕರಿ ಎಂ.ಎಸ್. ಭಟ್, ಹವ್ಯಕ ವಲಯ ಅಧ್ಯಕ್ಷೆ ವಿದ್ಯಾಗೌರಿ, ನ್ಯಾಯವಾದಿ ಚಿದಾನಂದ ಬೈಲಾಡಿ ಮೊದಲಾದವರು ಉಪಸ್ಥಿತರಿದ್ದರು.
ರೋಟರಿ ಕ್ಲಬ್ ಉಪಾಧ್ಯಕ್ಷ ಪರಮೇಶ್ವರ್ ಸ್ವಾಗತಿಸಿ, ವಂದಿಸಿದರು. ರೋಟರಿ ಪದಾಧಿಕಾರಿಗಳು, ಸದಸ್ಯರು, ಹವ್ಯಕ ವಲಯ ಸದಸ್ಯರು, ರಿಕ್ಷಾ ಸಂಘಟನೆಯ ಸದಸ್ಯರು ಶಿಬಿರದಲ್ಲಿ ರಕ್ತದಾನ ಮಾಡಿದರು.







