ನೀವು ನಮ್ಮವರಲ್ಲ : ಐಸಿಸ್‌ಗೆ ಅಮೆರಿಕನ್ ಮುಸ್ಲಿಮ್ ಸಂಘಟನೆ

ವಾಶಿಂಗ್ಟನ್, ಜೂ. 14: ಅಮೆರಿಕನ್ ಮುಸ್ಲಿಮರ ಅತಿ ದೊಡ್ಡ ನಾಗರಿಕ ಹಕ್ಕುಗಳ ಸಂಘಟನೆ ‘ಕೌನ್ಸಿಲ್ ಆನ್ ಅಮೆರಿಕನ್-ಇಸ್ಲಾಮಿಕ್ ರಿಲೇಶನ್ಸ್ (ಸಿಎಐಆರ್)’ನ ರಾಷ್ಟ್ರೀಯ ಕಾರ್ಯಕಾರಿ ನಿರ್ದೇಶಕರು, ಐಸಿಸ್‌ಗೆ ನಿಷ್ಠೆ ಘೋಷಿಸಿದ ವ್ಯಕ್ತಿಯೋರ್ವ ಒರ್ಲಾಂಡೊದಲ್ಲಿ ನಡೆಸಿದ ಸಾಮೂಹಿಕ ಹತ್ಯಾಕಾಂಡವನ್ನು ಖಂಡಿಸಿದ್ದಾರೆ.
‘‘ಗುಂಡು ಹಾರಾಟವು ಸ್ಪಷ್ಟವಾಗಿ ದ್ವೇಷ ಅಪರಾಧವಾಗಿದೆ’’ ಎಂದು ಸುದ್ದಿಗಾರರೊಂದಿಗೆ ಮಾತನಾಡಿದ ನಿಹಾದ್ ಅವದ್ ಹೇಳಿದರು.
ಘಟನೆಯಲ್ಲಿ 50 ಮಂದಿ ಸಾವಿಗೀಡಾಗಿದ್ದು, 50ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡಿರುವವರ ಪೈಕಿ ಅಗತ್ಯವಿರುವವರಿಗೆ ರಕ್ತದಾನ ಮಾಡುವಂತೆಯೂ ಸಿಎಐಆರ್ ಮುಸ್ಲಿಮ್ ಸಮುದಾಯಕ್ಕೆ ಮನವಿ ಮಾಡಿದ್ದಾರೆ. ಗಾಯಗೊಂಡವರಲ್ಲಿ ಹೆಚ್ಚಿನವರ ಪರಿಸ್ಥಿತಿ ಗಂಭೀರವಾಗಿದೆ.
‘‘ಈ ಹತ್ಯಾಕಾಂಡವನ್ನು ನಾವು ಸಾಧ್ಯವಿರುವಷ್ಟು ಕಟುವಾದ ಮಾತುಗಳಿಂದ ಖಂಡಿಸುತ್ತೇವೆ. ಇದು ಅಮೆರಿಕನ್ನರಾಗಿ ಮತ್ತು ಮುಸ್ಲಿಮರಾಗಿ ನಮ್ಮ ವೌಲ್ಯಗಳನ್ನು ಉಲ್ಲಂಘಿಸುತ್ತದೆ. ಐಸಿಸ್ ಮತ್ತು ಅದರ ಬೆಂಬಲಿಗರಿಗೆ ನಾನು ಹೇಳುವುದಿಷ್ಟೆ- ನೀವು ನಮ್ಮನ್ನು ಪ್ರತಿನಿಧಿಸುವುದಿಲ್ಲ. ನೀವು ನಮ್ಮ ಪರವಾಗಿ ಮಾತನಾಡಲು ಸಾಧ್ಯವಿಲ್ಲ. ನೀವು ದಾರಿ ತಪ್ಪಿದವರು’’ ಎಂದು ಅವದ್ ಹೇಳಿದರು.
‘‘ಅವರು ನಮ್ಮ ಸುಂದರ ಧರ್ಮಕ್ಕೆ ಯಾವತ್ತೂ ಸೇರಿದವರಲ್ಲ. ನಮ್ಮ ಧರ್ಮಕ್ಕೆ ಸೇರಿದ್ದೇವೆಂದು ಅವರು ಹೇಳಿಕೊಳ್ಳುತ್ತಾರೆ. ಆದರೆ, ಅವರ ಭಯೋತ್ಪಾದನೆ, ಅವರ ವಿವರಣೆ ಮತ್ತು ಅವರ ಕೃತ್ಯಗಳು ಹಾಗೂ ಮತಿಹೀನ ಹಿಂಸೆಯನ್ನು 170 ಕೋಟಿ ಜನರು ಒಕ್ಕೊರಲಿನಿಂದ ತಿರಸ್ಕರಿಸುತ್ತಾರೆ’’ ಎಂದರು.
ಅದೇ ವೇಳೆ, ಈ ಹತ್ಯಾಕಾಂಡವನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳದಂತೆ ಅವರು ಅಮೆರಿಕದ ರಾಜಕಾರಣಿಗಳಿಗೆ ಎಚ್ಚರಿಕೆಯನ್ನೂ ನೀಡಿದರು. ಬದಲಿಗೆ, ಸಂತ್ರಸ್ತರನ್ನು ಗೌರವಿಸುವಂತೆ ಅವರು ಕರೆ ನೀಡಿದರು.







