ಕುಸಿಯುತ್ತಿರುವ ಅಡಿಕೆ ಧಾರಣೆ: ಆತಂಕದಲ್ಲಿ ಬೆಳೆಗಾರ
ಸರಕಾರದ ಮಧ್ಯ ಪ್ರವೇಶಕ್ಕೆ ರೈತರ, ವರ್ತಕರ ಆಗ್ರಹ

ಸುಳ್ಯ, ಜೂ.14: ಕಳೆದೆರಡು ತಿಂಗಳಿನಿಂದ ಸ್ಥಿರವಾಗಿದ್ದ ಅಡಿಕೆ ಧಾರಣೆ ಹತ್ತು ದಿನಗಳಿಂದ ನಿರಂತರ ಕುಸಿಯುತ್ತಿದ್ದು, ರೈತರಲ್ಲಿ ಆತಂಕ ಸೃಷ್ಟಿಸಿದೆ.
ಜಿಲ್ಲೆಯಲ್ಲಿ ಚಾಲಿ ಅಡಿಕೆಯನ್ನೇ ಬೆಳೆಯುತ್ತಿದ್ದು, ಹಳೆ ಅಡಿಕೆಗೆ ಗರಿಷ್ಠ 325ರವರೆಗೆ ಹಾಗೂ ಹೊಸ ಅಡಿಕೆಗೆ 250ರವರೆಗೆ ಧಾರಣೆ ಏರಿತ್ತು. ಎರಡು ತಿಂಗಳಿನಿಂದ ಸ್ವಲ್ಪಇಳಿಕೆ ಕಂಡಿದ್ದ ಧಾರಣೆ 300 ಹಾಗೂ 240ರಲ್ಲಿ ಸ್ಥಿರವಾಗಿತ್ತು. ಆದರೆ ವಾರದಿಂದ ನಿರಂತರ ಕುಸಿತ ಕಂಡಿದ್ದು, 290 ಹಾಗೂ 220ಕ್ಕೆ ಇಳಿದಿದೆ.
ದಾವಣಗೆರೆ, ಶಿವಮೊಗ್ಗದಲ್ಲಿ ಕೆಂಪಡಿಕೆ ಬೆಳೆಯುತ್ತಿದ್ದು, ಅಲ್ಲಿ ಧಾರಣೆ ಪಾತಾಳ ಕಂಡಿದೆ. ಗುಟ್ಕ ಕಂಪೆನಿಗಳು ಕಡಿಮೆ ಗುಣಮಟ್ಟದ ಅಡಿಕೆಯನ್ನು ಗುಟ್ಕಕ್ಕೆ ಬಳಸುತ್ತಿದ್ದು, ಕೆಂಪಡಿಕೆಗೆ ಬೇಡಿಕೆ ಕಡಿಮೆಯಾಗಿದೆ. ಪ್ರತಿ ಕೆಜಿಗೆ ವರ್ಷದ ಹಿಂದೆ 800 ರೂಪಾಯಿ ಇದ್ದ ಕೆಂಪಡಿಕೆ ಧಾರಣೆ ಈಗ 200ಕ್ಕೂ ಕೇಳುವವರಿಲ್ಲ ಎಂಬ ಸ್ಥಿತಿಗೆ ಬಂದಿದೆ. ದಾಸ್ತಾನಿಟ್ಟ ಕೆಂಪಡಿಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡದೆ ಅಭಾವ ಸೃಷ್ಠಿಸಿದಲ್ಲಿ ಧಾರಣೆ ಮತ್ತೂ ಹೆಚ್ಚಾಗುವುದು ಎಂದು ಸಂಗ್ರಹಿಸಿಟ್ಟ ಅಡಿಕೆ ಈಗ ಯಾರಿಗೂ ಬೇಡವಾಗಿದೆ.
ಧಾರಣೆ ಕುಸಿತದ ಪ್ರಭಾವ ಚಾಲಿ ಅಡಿಕೆಗೂ ಸ್ವಲ್ಪ ಮಟ್ಟಿಗೆ ತಟ್ಟಿದೆ. ಅಡಿಕೆಯನ್ನು ಒಮ್ಮೆಗೆ ಮಾರುಕಟ್ಟೆಗೆ ಬಿಡದೆ ಅಗತ್ಯವಿರುವಷ್ಟೇ ಮಾರುಕಟ್ಟೆಗೆ ಬಿಟ್ಟರೆ ಧಾರಣೆ ಸ್ಥಿರತೆಯನ್ನು ಕಾಪಾಡಬಹುದು. ಆದರೆ ಅತಿ ಆಸೆಗೆ ಬಲಿಬಿದ್ದು ಇದ್ದ ಧಾರಣೆಯನ್ನೂ ಕಳೆದುಕೊಳ್ಳುವ ಸ್ಥಿತಿ ಚಾಲಿ ಅಡಿಕೆಗೂ ಬಾರದಿರಲಿ ಎಂಬುದು ಇಲ್ಲಿನ ರೈತರ ಅನಿಸಿಕೆ.
ಗುಟ್ಕ ನಿಷೇಧದ ಗುಮ್ಮ ಹಾಗೂ ಆಮದು ಪ್ರಮಾಣ ಹೆಚ್ಚಳದಿಂದ ಧಾರಣೆ ಕುಸಿತವಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ವಿದೇಶದಿಂದ ತೆರಿಗೆ ತಪ್ಪಿಸಿ ಆಮದು ನಡೆಯುತ್ತಿದ್ದು, ಕಳಪೆ ಗುಣಮಟ್ಟದ ಅಡಿಕೆ ಕನಿಷ್ಠ ಬೆಲೆಗೆ ಸಿಗುತ್ತಿರುವುದರಿಂದ ಇಲ್ಲಿನ ಅಡಿಕೆಗೆ ಬೇಡಿಕೆ ಕಡಿಮೆಯಾಗಿದೆ ಎನ್ನುವುದು ವ್ಯಾಪಾರಿಗಳ ಅನಿಸಿಕೆ. ಈ ಧಾರಣೆ ಶಾಶ್ವತವಲ್ಲ, ಸುಧಾರಿಸಬಹುದು ಎನ್ನುತ್ತಾರೆ ವರ್ತಕರು.
ಸಹಕಾರಿ ಕ್ಷೇತ್ರದ ಕ್ಯಾಂಪ್ಕೊ, ಮಾಸ್ ಖರೀದಿ ಸಾಮರ್ಥ್ಯಕ್ಕೆ ಹೋಲಿಸಿದಾಗ ಅಡಿಕೆ ಮಾರುಕಟ್ಟೆಯ ಹಿಡಿತ ಈಗಲೂ ಖಾಸಗಿಯವರ ಕೈಯಲ್ಲಿದೆ ಎಂಬುದು ಸಾಮಾನ್ಯ ನಂಬಿಕೆ. ಆದರೆ ಖಾಸಗಿ ಮಾರುಕಟ್ಟೆ ಬೀಳುವ ಮೊದಲೇ ಸಹಕಾರಿ ಸಂಸ್ಥೆಗಳೇ ಧಾರಣೆಯನ್ನು ಕಡಿಮೆ ಮಾಡುತ್ತಿವೆ ಎನ್ನುತ್ತಾರೆ ಖಾಸಗಿ ವ್ಯಾಪಾರಿಗಳು.
ದುಬಾರಿ ಗೊಬ್ಬರ, ಕಾರ್ಮಿಕರ ಅಲಭ್ಯತೆ, ಅಡಿಕೆ ಔಷಧಿ ಸಿಂಪಡಣೆ, ಎಲ್ಲವೂ ಸಮಸ್ಯೆಯಾಗಿ ಪರಿಣಮಿಸಿದೆ. ಬರದಿಂದ ಅರ್ಧ ಅಡಿಕೆ ತೋಟ ಕಳೆದುಕೊಂಡಿರುವ ರೈತರು ತೋಟಕ್ಕೆ ಕೊಳೆ ರೋಗ ಅಂಟಿಕೊಂಡಲ್ಲಿ ಮತ್ತಷ್ಟು ಸಂಕಷ್ಟಕ್ಕೆ ಸಿಕ್ಕಿ ಹಾಕಿಕೊಳ್ಳಬೇಕಾಗುತ್ತದೆ ಎನ್ನುವುದು ರೈತರ ಅನಿಸಿಕೆ.







