ಮುಸ್ಲಿಂ ದ್ವೇಷಕ್ಕೆ ಅವಕಾಶ ನೀಡದ ನ್ಯೂಯಾರ್ಕ್ ಪ್ರಜೆಗಳು
ಒರ್ಲ್ಯಾಂಡೋ ಗೇ ಕ್ಲಬ್ ಹತ್ಯಾಕಾಂಡದ ಹಿನ್ನೆಲೆ

ನ್ಯೂಯಾರ್ಕ್ , ಜೂ. 14 : ಒರ್ಲ್ಯಾಂಡೋ ಗೇ ಕ್ಲಬ್ ಮೇಲಿನ ದಾಳಿ ನಡೆಸಿದ್ದು ಉಮರ್ ಮತೀನ್ ಎಂಬ ಹೆಸರಿನ ವ್ಯಕ್ತಿ ಎಂಬುದು ಬಹಿರಂಗವಾಗುತ್ತಲೇ ಅಮೆರಿಕದೆಲ್ಲೆಡೆ ಮತ್ತೆ ಮುಸ್ಲಿಂ ವಿರೋಧಿ ಭಾವನೆಗಳು, ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಇದರ ಮುಂದುವರಿದ ಭಾಗವಾಗಿ ಮುಸ್ಲಿಮರ ಮೇಲೆ ಹಲ್ಲೆ ನಡೆಸುವ, ಅವಹೇಳನ ಮಾಡಲು ಕೆಲವು ಬಲಪಂಥೀಯ ಗುಂಪುಗಳು ಪ್ರಯತ್ನಿಸುತ್ತಿವೆ. ಆದರೆ ನ್ಯೂಯಾರ್ಕ್ ನಲ್ಲಿ ನಡೆದ ಘಟನೆಯೊಂದು ಇಂತಹ ಶಕ್ತಿಗಳಿಗೆ ಹೆಚ್ಚಿನ ಜನಬೆಂಬಲ ಇಲ್ಲ ಹಾಗು ಹೆಚ್ಚಿನ ಜನತೆ ಪರಸ್ಪರ ಪ್ರೀತಿ , ವಿಶ್ವಾಸದಿಂದ ಬದುಕಲು ಬಯಸುವವರು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಸೋಮವಾರ ಬೆಳಗ್ಗೆ ತನ್ನ ಕಚೇರಿಗೆ ಹೋಗುತ್ತಿದ್ದ ಅಮೈರ ಹಸನ್ ಎಂಬ ಮಹಿಳೆ ಈ ಘಟನೆಯನ್ನು ತನ್ನ ಫೇಸ್ ಬುಕ್ ಪೇಜ್ ನಲ್ಲಿ ಬರೆದಿದ್ದು ಸಾವಿರಾರು ಮಂದಿ ಅದನ್ನು ಶೇರ್ ಮಾಡಿಕೊಂಡಿದ್ದಾರೆ. ಅಮೈರ ಪ್ರಯಾಣಿಸುತ್ತಿದ್ದ ರೈಲಿಗೆ ನುಗ್ಗಿದ ವ್ಯಕ್ತಿಯೊಬ್ಬ ಅದರಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಹಿಜಾಬ್ ಧಾರಿ ಮಹಿಳೆಯರನ್ನು ಅವಹೇಳನ ಮಾಡತೊಡಗಿದ. " ನೀವು ಇಬ್ಬರು ವಿದೇಶಿಯರು ತಮ್ಮ ಬಾಂಬುಗಳ ಜೊತೆ ತಮ್ಮ ದೇಶಕ್ಕೆ ವಾಪಸ್ ಹೋಗಲಿ ' ಎಂದು ಆರ್ಭಟಿಸಿದ. ಇದರಿಂದ ಆಘಾತಗೊಂಡ ಅಮೈರ ಆತನನ್ನು ವಿರೋಧಿಸಲು ಬಾಯಿ ತೆಗೆಯುವ ಮೊದಲೇ ರೈಲಿನಲ್ಲಿದ್ದ ಎಲ್ಲರೂ ಒಟ್ಟಾಗಿ ಆತನ ವರ್ತನೆಯನ್ನು ತೀವ್ರವಾಗಿ ಖಂಡಿಸಿ , ಪ್ರತಿಭಟಿಸಿದರು. ಆತ ತಕ್ಷಣ ಆ ಇಬ್ಬರು ಮಹಿಳೆಯರನ್ನು ಅವರ ಪಾಡಿಗೆ ಬಿಟ್ಟು ವಾಪಸ್ ಹೋಗಬೇಕು ಎಂದು ಹೇಳಿದರು.
ಒಬ್ಬ ವ್ಯಕ್ತಿ ಎದುರು ಬಂದು ಸ್ಪಷ್ಟವಾಗಿ " ಸರ್ , ಇದು ನ್ಯೂಯಾರ್ಕ್. ಜಗತ್ತಿನ ಅತ್ಯಂತ ವೈವಿಧ್ಯತೆಯ ನಗರ. ಇಲ್ಲಿ ನಮ್ಮ ಸುರಕ್ಷತೆಯನ್ನು ನಾವೇ ನೋಡಿಕೊಳ್ಳುತ್ತೇವೆ. ಉಳಿದವರು ಏನು ಮಾಡುತ್ತಾರೆ , ಅವರು ಯಾರನ್ನು ಪ್ರೀತಿಸುತ್ತಾರೆ ಇತ್ಯಾದಿಗಳ ಬಗ್ಗೆ ನಾವು ತಲೆಕೆಡಿಸಿಕೊಳ್ಳುವುದಿಲ್ಲ. ಹಾಗಾಗಿ ನೀವು ಈಗಲೇ ಈ ಇಬ್ಬರು ಮಹಿಳೆಯರನ್ನು ಬಿಟ್ಟು ಇಲ್ಲಿಂದ ಹೊರಡಿ " ಎಂದು ಹೇಳಿದ.
ಇಷ್ಟು ಹೇಳಿ ರೈಲನ್ನು ನಿಲ್ಲಿಸಿ ಎಲ್ಲರು ಒಟ್ಟಾಗಿ ಆತನನ್ನು ಕೆಳಗಿಳಿಸಿ ಸಂಭ್ರಮಿಸಿದರು ಎಂದು ಅಮೈರ ಸಂತಸ ವ್ಯಕ್ತ ಪಡಿಸಿದ್ದಾರೆ.







