ಮೊಂಟೆಪದವು ಸರಕಾರಿ ಶಾಲೆಯಲ್ಲಿ ಎಲ್‌ಕೆಜಿ, ಸಿಸಿ ಕ್ಯಾಮರಾ ಸೌಲಭ್ಯ ಉದ್ಘಾಟನೆ

ಕೊಣಾಜೆ, ಜೂ.14: ರಾಜ್ಯ ಸರಕಾರ ಶಿಕ್ಷಣಕ್ಕೆ ಬಹಳಷ್ಟು ಪ್ರೋತ್ಸಾಹ ನೀಡುತ್ತಿದ್ದು ಖಾಸಗಿ ಶಾಲೆಗಳಿಗೆ ಸರಿಸಮನಾಗಿ ಎಲ್ಲ ಸೌಲಭ್ಯ ಒದಗಿಸುತ್ತಿದೆ. ಮೊಂಟೆಪದವಿನ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ಉದ್ಘಾಟನೆಗೊಳ್ಳುವ ಮೂಲಕ ಅದೆಷ್ಟೋ ಪೋಷಕರ ಕನಸು ಈಡೇರಿದೆ. ಹಾಗಿದ್ದರೂ ಯಾವುದೇ ಕಾರಣಕ್ಕೆ ಮಕ್ಕಳಿಗೆ ಶಿಕ್ಷಕರಾಗಲೀ ಪೆೆಷಕರಾಗಲೀ ಒತ್ತಡ ಹಾಕಬಾರದು ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಸಲಹೆ ನೀಡಿದ್ದಾರೆ.
ಅವರು ನರಿಂಗಾನ ಗ್ರಾಮದ ಮೊಂಟೆಪದವಿನ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಎಲ್‌ಕೆಜಿ ಉದ್ಘಾಟನೆ, ಸಿಸಿ ಕ್ಯಾಮರಾ ಉದ್ಘಾಟಿಸಿದ ಬಳಿಕ ಶೂ ಭಾಗ್ಯ ಕಾರ್ಯಕ್ರಮದಡಿಯಲ್ಲಿ ಶೂ ವಿತರಿಸಿ ಮಾತನಾಡಿದರು.
ಇನ್ನೇನಿದ್ದರೂ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಶಿಕ್ಷಕರು ಹಾಗೂ ಅದಕ್ಕೆ ಪೋಷಕರು ಸಹಕರಿಸುವುದು ಮುಖ್ಯ. ಹಾಗಾಗಿ ಮುಂದಿನ ದಿನಗಳಲ್ಲಿ ಸರಕಾರಿ ಶಾಲೆಗಳ ಕೊಠಡಿಗಳು ವಿದ್ಯಾರ್ಥಿಗಳಿಂದ ತುಂಬಿ ತುಳುಕಲಿದೆ ಎಂದು ಅಶಿಸಿದರು.
ಸರಕಾರ ವಿದ್ಯಾರ್ಥಿಗಳಿಗೆ ಶಿಕ್ಷಣ ಲಭಿಸಬೇಕು ಎಂಬ ನೆಲೆಯಲ್ಲಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ಸಮರ್ಪಕವಾಗಿ ಬಳಸಿದರೆ ಮಾತ್ರ ಯೋಜನೆಗೊಂದು ಅರ್ಥ ಬರುವುದು. ಈ ಬಾರಿ ಶೂ ಭಾಗ್ಯ ಕಾರ್ಯಕ್ರಮ ಆಯೋಜಿಸಲಾಗಿದ್ದು ಮಕ್ಕಳಿಗೆ ವಿತರಿಸಿದ ಶೂಗಳಲ್ಲಿ ಏನಾದರೂ ದೋಷ ಕಂಡು ಬಂದರೆ ನೇರವಾಗಿ ದೂರು ಕೊಡಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ್ ಪಿ. ಕರ್ಕೇರ, ಉಪಾಧ್ಯಕ್ಷ ಅಬ್ಬಾಸ್ ಅಲಿ, ಸದಸ್ಯ ಹೈದರ್ ಕೈರಂಗಳ, ಮಾಜಿ ಸದಸ್ಯ ಉಮ್ಮರ್ ಪಜೀರು, ಮುಡಿಪು ಬ್ರೈಟ್ ಶಿಕ್ಷಣ ಸಂಸ್ಥೆಯ ಆಡಳಿತ ನಿರ್ದೆೇಶಕ ಅಬ್ದುಲ್ ಜಲೀಲ್ ಮೋಂಟುಗೋಳಿ, ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ಇಸ್ಮಾಯೀಲ್ ಮೀನಂಕೋಡಿ, ಸದಸ್ಯರಾದ ಅಬ್ದುರ್ರಹ್ಮಾನ್, ಮುರಳೀಧರ ಶೆಟ್ಟಿ ಮೋರ್ಲ, ಫಯಾಝ್, ಉಮ್ಮರ್, ಅಬ್ದುಲ್ಲತೀಫ್ ಕಾಪಿಕಾಡು, ಇನ್ಫೋಸಿಸ್‌ನ ಸಾರ್ವಜನಿಕ ಸಂಪರ್ಕ ಅಧಿಕಾರಿ ಉದಯ ಕುಮಾರ್, ಪದ್ಮನಾಭ ಎನ್ ನರಿಂಗಾನ, ಮಂಜನಾಡಿ ಗ್ರಾಮ ಪಂಚಾಯತ್ ಸದಸ್ಯ ಇಸ್ಮಾಯೀಲ್, ಮೊಂಟೆಪದವು ಪ್ರೌಢ ಶಾಲಾ ಮುಖ್ಯ ಶಿಕ್ಷಕ ಸಂತೋಷ್ ಕುಮಾರ್ ಟಿ.ಎನ್, ಎಸ್‌ಡಿಎಂಸಿ ಅಧ್ಯಕ್ಷ ಅಬೂಬಕರ್ ಆಳ್ವರಬೆಟ್ಟು, ಹನೀಫ್ ಚಂದಹಿತ್ಲು, ನಾಸಿರ್ ಬಾಳೆಪುಣಿ ಹಾಗೂ ನಝರ್ ಷಾ ಪಟ್ಟೋರಿ ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಈಶ್ವರ್ ನಾಯ್ಕ ಸ್ವಾಗತಿಸಿದರು. ದೈಹಿಕ ಶಿಕ್ಷಕ ಪ್ರಭಾಕರ ಜೋಗಿ ವಂದಿಸಿದರು.







