ವಿಶ್ವ ಶ್ರೇಷ್ಠ ಅಥ್ಲೀಟ್ ಆಗುವತ್ತ ವಿರಾಟ್ ಕೊಹ್ಲಿ ಚಿತ್ತ: ಟ್ರೈನರ್

ಹೊಸದಿಲ್ಲಿ, ಜೂ.14: ವಿರಾಟ್ ಕೊಹ್ಲಿ ಭಾರತದ ಫಿಟ್ ಆಗಿರುವ ಕ್ರಿಕೆಟಿಗನೆಂಬ ಹೆಗ್ಗಳಿಕೆ ಹೊಂದಿದ್ದಾರೆ. ಆದರೆ, ಕೊಹ್ಲಿ ಇಷ್ಟಕ್ಕೇ ತೃಪ್ತರಾಗಿಲ್ಲ. ಅವರಿಗೆ ವಿಶ್ವದ ಶ್ರೇಷ್ಠ ಅಥ್ಲೀಟ್ ಆಗಬೇಕೆಂಬ ಬಯಕೆಯಿದೆಯಂತೆ. ಹೀಗೆಂದು ಕೊಹ್ಲಿಗೆ ಭಾರತ ಹಾಗೂ ಆರ್‌ಸಿಬಿ ತಂಡದಲ್ಲಿ ಫಿಟ್‌ನೆಸ್ ಕೋಚ್ ಆಗಿರುವ ಶಂಕರ್ ಬಸು ಬಹಿರಂಗಪಡಿಸಿದ್ದಾರೆ.
ಕೊಹ್ಲಿ ಫಿಟ್‌ನೆಸ್ ಕಾಯ್ದುಕೊಳ್ಳಲು ಹೆಚ್ಚು ಬೆವರಿಳಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕೊಹ್ಲಿಗೆ ಸಿಕ್ಸರ್ ಹಾಗೂ ಬೌಂಡರಿ ಬಾರಿಸುವುದೆಂದರೆ ನೀರು ಕುಡಿದಷ್ಟೇ ಸುಲಭ.
‘‘ವಿರಾಟ್ ವಿಶ್ವದ ಶ್ರೇಷ್ಠ ಅಥ್ಲೀಟ್ ಆಗಬೇಕೆಂದು ನಿರ್ಧರಿಸಿದ್ದಾರೆ. ಆಕಾಶ ಸೀಮಿತ. ಕೊಹ್ಲಿಗೆ ಆದರ್ಶಪ್ರಾಯರಾಗಿರುವವರು ಅಥ್ಲೀಟ್ ಸಾಮರ್ಥ್ಯದ ಮೂಲಕ ಅವರಿಗಿಂತ ಎಷ್ಟೊ ಮುಂದಿದ್ದಾರೆ. ಕೊಹ್ಲಿ ಕೂಡ ಸ್ಪರ್ಧೆಯಿಂದ ದೂರ ಸರಿಯಲು ಇಷ್ಟಪಡಲಾರರು. ಅವರು ಅದನ್ನು ಎರಡೂ ಕೈಗಳಿಂದ ಬಾಚಿಕೊಳ್ಳಲಿದ್ದಾರೆ’’ಎಂದು ಬಸು ಬಿಸಿಸಿಐ ಡಾಟ್ ಟಿವಿಗೆ ತಿಳಿಸಿದ್ದಾರೆ.
ಬಸು ಅವರು ಕೊಹ್ಲಿ ಅವರೊಂದಿಗೆ ಭಾರತ ಹಾಗೂ ಆರ್‌ಸಿಬಿ ತಂಡ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
‘‘ವಿರಾಟ್ ಕೊಹ್ಲಿ ಅತ್ಯುತ್ತಮ ವ್ಯಕ್ತಿ. ಅವರಂತಹ ಅಥ್ಲೀಟ್‌ಗಳು ನನ್ನೊಂದಿಗೆ ಇರುವುದು ನನ್ನ ಅದೃಷ್ಟ ಎಂದು ಭಾವಿಸುವೆ. ಅವರೊಂದಿಗೆ ನನ್ನ ಸ್ನೇಹ-ಸಂಬಂಧ 8 ವರ್ಷಗಳ ಹಿಂದೆಯೇ ಐಪಿಎಲ್‌ನ ಮೂಲಕ ಆರಂಭವಾಗಿತ್ತು’’ಎಂದು ಬಸು ಹೇಳಿದ್ದಾರೆ.
‘‘ನಿಮ್ಮ ಪದ್ಧತಿಯನ್ನು ಒಮ್ಮೆ ಕೊಹ್ಲಿಗೆ ಮನವರಿಕೆ ಮಾಡಿದರೆ ಅವರು ನಿಮಗೆ ಸವಾಲು ಆಗಲಾರರು. ಅವರು ಅಗತ್ಯವಿದ್ದಾಗಲೆಲ್ಲಾ ನಿರಂತರ ಕಠಿಣ ಶ್ರಮಪಡುತ್ತಿದ್ದರು. ಅವರು ತನ್ನ ಜೀವನಶೈಲಿಯಲ್ಲೂ ಸಾಕಷ್ಟು ಬದಲಾವಣೆ ಮಾಡಿಕೊಂಡಿದ್ದರು. ನಾನು ಭಾರತೀಯ ತಂಡವನ್ನು ಪೂರ್ಣಕಾಲಿಕ ಟ್ರೈನರ್ ಆಗಿ ಸೇರಿದ ಬಳಿಕ ಅವರೊಂದಿಗೆ ಪ್ರತಿದಿನ ಕಳೆದಿದ್ದೇನೆ. ಇದು ಶೇ.90ರಷ್ಟು ಕೆಲಸವನ್ನು ಸುಲಭವಾಗಿಸಿತು’’ ಎಂದು ಬಸು ಹೇಳಿದರು.
‘‘ಕಳೆದ ವರ್ಷ ಶ್ರೀಲಂಕಾ ಪ್ರವಾಸ ಕೈಗೊಂಡ ನಂತರ ಪ್ರತಿದಿನ ಭಾರ ಎತ್ತುತ್ತಿದ್ದೆ. ಇದು ನನ್ನಲ್ಲಿ ಬದಲಾವಣೆ ತಂದಿತ್ತು. ಈ ಕಾರಣದಿಂದಲೇ ನಾನು ಈ ವರ್ಷದ ಐಪಿಎಲ್‌ನಲ್ಲಿ 38 ಸಿಕ್ಸರ್ ಬಾರಿಸಲು ಸಾಧ್ಯವಾಯಿತು’’ ಎಂದು ಸ್ವತಹ ಕೊಹ್ಲಿ ಹೇಳಿಕೊಂಡಿದ್ದಾರೆ.







