ಪುತ್ತೂರು: ಡೆಂಗ್ ಪ್ರಕರಣದ ಮಾಹಿತಿಗಾಗಿ ತಾ.ಪಂ. ಅಧ್ಯಕ್ಷರಿಂದ ಆಸ್ಪತ್ರೆ ಭೇಟಿ

ಪುತ್ತೂರು, ಜೂ.14: ತಾಲೂಕಿನಲ್ಲಿ ಡೆಂಗ್ ಜ್ವರ ಬಾಧಿಸುತ್ತಿದ್ದು, ಈ ಬಗ್ಗೆ ಮಾಹಿತಿ ಅರಿತುಕೊಳ್ಳಲು ತಾ.ಪಂ. ಅಧ್ಯಕ್ಷೆ ಭವಾನಿ ಚಿದಾನಂದ ಮಂಗಳವಾರ ಅಪರಾಹ್ನ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ರೋಗ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು ಮತ್ತು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಂದ ಮಾಹಿತಿ ಪಡೆದರು.
ಹೊರ ರೋಗಿ ಚಿಕಿತ್ಸಾ ವಿಭಾಗದಿಂದ ಪರಿಶೀಲನೆ ಆರಂಭಿಸಿದ ಅವರು ಎಲ್ಲ ವಿಭಾಗಗಳು ಮತ್ತು ಪ್ರಯೋಗಾಲಯಕ್ಕೆ ಭೇಟಿ ನೀಡಿದರು. ಬಳಿಕ ಒಳ ರೋಗಿಗಳ ಚಿಕಿತ್ಸಾ ವಿಭಾಗಕ್ಕೆ ತೆರಳಿ ಚಿಕಿತ್ಸೆ ಪಡೆಯುತ್ತಿರುವರ ಯೋಗಕ್ಷೇಮ ವಿಚಾರಿಸಿದರು.
ಈ ಸಂದರ್ಭ ಅಧ್ಯಕ್ಷರಿಗೆ ಮಾಹಿತಿ ನೀಡಿದ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಪ್ರದೀಪ್, ಶಂಕಿತ ಎನ್‌ಎಸ್1 ಪ್ರಕರಣಗಳಿಗೆ ಚಿಕಿತ್ಸೆ ನೀಡುವುದರ ಜತೆಗೆ ಎಲ್ಲ ಪ್ರಕರಣಗಳನ್ನು ಎಲಿಸಾ ಪರೀಕ್ಷೆಗೆ ನಡೆಸಲಾಗುತ್ತಿದೆ. ದೃಢ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಚಿಕಿತ್ಸೆ ನೀಡಲಾಗುತ್ತದೆ. ಕಳೆದೆರಡು ವಾರಗಳಿಗೆ ಹೋಲಿಸಿದಲ್ಲಿ ಇದೀಗ ರೋಗ ಪ್ರಮಾಣ ಇಳಿಮುಖವಾಗಿದೆ ಎಂದರು.
ಶವಾಗಾರಕ್ಕೆ ತೆರಳುವ ಪ್ರದೇಶದಲ್ಲಿ ಬೀದಿ ದೀಪ ಉರಿಯದೆ ಸಮಸ್ಯೆ ಉಂಟಾಗುತ್ತಿರುವುದನ್ನು ಅರಿತುಕೊಂಡ ಅಧ್ಯಕ್ಷರು ತಕ್ಷಣವೇ ದುರಸ್ತಿಗೊಳಿಸುವಂತೆ ಸೂಚನೆ ನೀಡಿದರು.
ಈಗ ಇರುವ ಜನರೇಟರ್ ಚಿಕ್ಕದಾಗಿದ್ದು, ತುರ್ತು ಸಮಯದಲ್ಲಿ ಇದು ಸಾಕಾಗುತ್ತಿಲ್ಲ. ದೊಡ್ಡ ಜನರೇಟರ್‌ನ ಆವಶ್ಯಕತೆ ಇದೆ ಎಂದು ಆಡಳಿತ ವೈದ್ಯಾಧಿಕಾರಿ ಅಧ್ಯಕ್ಷರಿಗೆ ಈ ಸಂದರ್ಭದಲ್ಲಿ ತಿಳಿಸಿದರು.
ತಾಪಂ ಸದಸ್ಯರಾದ ಸಾಜ ರಾಧಾಕೃಷ್ಣ ಆಳ್ವ, ಮೀನಾಕ್ಷಿ ಮಂಜುನಾಥ್, ಶಿವರಂಜನ್, ಲಕ್ಷ್ಮಣ ಗೌಡ, ಹರೀಶ್ ಬಿಜತ್ರೆ, ಲಲಿತಾ ಈಶ್ವರ್ ಮತ್ತಿತರರು ಉಪಸ್ಥಿತರಿದ್ದರು.







