ಬಂಟ್ವಾಳ: ಶಾರ್ಟ್ ಸರ್ಕ್ಯೂಟ್‌ನಿಂದ ಹಟ್ಟಿಗೆ ಬೆಂಕಿ
6 ಲಕ್ಷ ರೂ.ಗೂ ಅಧಿಕ ನಷ್ಟ

ಬಂಟ್ವಾಳ, ಜೂ.14: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಮನೆಯ ಹಟ್ಟಿಗೆ ಬೆಂಕಿ ತಗುಲಿ ಹಟ್ಟಿಯಲ್ಲಿ ದಾಸ್ತಾನಿರಿಸಿದ್ದ ಅಪಾರ ಸೊತ್ತುಗಳ ಸಮೇತ ಹಟ್ಟಿ ಬೆಂಕಿಗಾಹುತಿಯಾದ ಘಟನೆ ಕೇಪು ಗ್ರಾಮದ ಬಡೆಕ್ಕೋಡಿ ಎಂಬಲ್ಲಿ ಸೋಮವಾರ ನಸುಕಿನ ವೇಳೆ ನಡೆದಿದೆ.
ಇಲ್ಲಿನ ಬಡೆಕ್ಕೋಡಿ ಈಶ್ವರ ನಾಯ್ಕ ಎಂಬವರಿಗೆ ಸೇರಿದ ಹಟ್ಟಿಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಮನೆಯವರ ಗಮನಕ್ಕೆ ಬರುವಷ್ಟರಲ್ಲಿ ಹಟ್ಟಿ ಅರ್ಧದಷ್ಟು ಉರಿದು ಹೋಗಿತ್ತು. ಹಟ್ಟಿಯಲ್ಲಿ ಬೈಹುಲ್ಲು, ತೆಂಗಿನಕಾಯಿ, ಒಣ ಅಡಿಕೆ, ಕಟ್ಟಿಗೆ ದಾಸ್ತಾನು ಮಾಡಲಾಗಿತ್ತು.
ಮನೆ ಮಂದಿ ನಿದ್ರಿಸುತ್ತಿದ್ದ ವೇಳೆ ದುರ್ಘಟನೆ ಸಂವಿಸಿದ್ದು ಬೆಂಕಿಯ ಕೆನ್ನಾಲಿಗೆಗೆ ಎರಡು ಸಾವಿರಕ್ಕೂ ಮಿಕ್ಕಿದ ಕೊಬ್ಬರಿ ತೆಂಗಿನಕಾಯಿ ಸುಟ್ಟು ಒಡೆಯುತ್ತಿದ್ದ ಶಬ್ದಕ್ಕೆ ಎಚ್ಚರಗೊಂಡಾಗ ಬೆಂಕಿ ಹಟ್ಟಿಯೆಲ್ಲೆಡೆ ಪಸರಿಸಿತ್ತು. ನೆರೆಹೊರೆಯ ಮನೆಯವರಿಗೆ ಸುದ್ದಿ ತಿಳಿಯುತ್ತಿದ್ದಂತೆ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸಲಾಯಿತು. ಬಂಟ್ವಾಳ ಅಗ್ನಿ ಶಾಮಕ ದಳಕ್ಕೂ ವಿಚಾರ ತಿಳಿಸಲಾಯಿತು. ಬೆಂಕಿಗೆ ಹಟ್ಟಿ ಮೇಲ್ಛಾವಣಿಯ ಪಕ್ಕಾಸು ಸಹಿತ ಹಟ್ಟಿಯೊಳಗಿದ್ದ ಎಲ್ಲ ಸೊತ್ತುಗಳು ಸುಟ್ಟು ಕರಕರವಾಗಿದೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬರುವಷ್ಟರಲ್ಲಿ ನೆರೆಹೊರೆಯವರು ಬೆಂಕಿಯನ್ನು ನಂದಿಸಿದ್ದರು. ಬೆಂಕಿ ಅವಘಡದಿಂದ ಸುಮಾರು 6 ಲಕ್ಷ ರೂ. ಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.







