ತುಳುನಾಡಿನ ಸಮಸ್ಯೆ ಬಗ್ಗೆ ಕನ್ನಡ ಚಿತ್ರರಂಗದಿಂದ ಮಲತಾಯಿ ಧೋರಣೆ ಆರೋಪ

ಮಂಗಳೂರು, ಜೂ. 14: ಕನ್ನಡ ಚಿತ್ರರಂಗದ ಕಲಾವಿದರು ತುಳುನಾಡಿನ ಸಮಸ್ಯೆಗಳ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆಪಾದಿಸಿರುವ ತುಳುನಾಡ ರಕ್ಷಣಾ ವೇದಿಕೆಯು, ಕನ್ನಡ ಚಿತ್ರರಂಗದ ಮಂದಿ ಇಲ್ಲಿನ ಸಮಸ್ಯೆಗಳ ವಿರುದ್ಧದ ಹೋರಾಟಕ್ಕೆ ದನಿಗೂಡಿಸಬೇಕು. ಒಂದು ವಾರದೊಳಗೆ ಈ ಕಾರ್ಯಕ್ಕೆ ಮುಂದಾಗದಿದ್ದಲ್ಲಿ ಕನ್ನಡ ಚಿತ್ರಗಳನ್ನು ತುಳುನಾಡಿನಲ್ಲಿ ಬಹಿಷ್ಕರಿಸಲಾಗುವುದು ಎಂದು ತಿಳಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಬಯಲು ಸೀಮೆ ಜಿಲ್ಲೆಗಳ ಶಾಶ್ವತ ನೀರಾವರಿ ಹೋರಾಟಕ್ಕೆ ಬೆಂಬಲ ಸೂಚಿಸಿ ಕೋಲಾರದಲ್ಲಿ ನಿರಂತರ ಹೋರಾಟಕ್ಕೆ ಕರ್ನಾಟಕ ಚಲನಚಿತ್ರ ವಾಣಜ್ಯ ಮಂಡಳಿ, ನಿರ್ಮಾಪಕರ ಮಂಡಳಿ ಹಾಗೂ ಕನ್ನಡ ಚಿತ್ರರಂಗದ ನಟ, ನಟಿಯರು ಮುಂದಾಗಿದ್ದಾರೆ. ಕನ್ನಡ ಚಿತ್ರರಂಗಕ್ಕೆ ತುಳುನಾಡಿನ ಕೊಡುಗೆ ಸಾಕಷ್ಟಿದೆ. ಬಯಲು ಸೀಮೆಯವರ ಪ್ರತಿ ಸಮಸ್ಯೆಗೂ ಸ್ಪಂದಿಸುವ ಚಿತ್ರರಂಗದವರು ಕರಾವಳಿ ಪ್ರದೇಶದ ಸಮಸ್ಯೆಯತ್ತಲೂ ಗಮನ ಹರಿಸಬೇಕು. ಇಲ್ಲಿ ನಡೆಯುತ್ತಿರುವ ನೇತ್ರಾವತಿ ನದಿ ತಿರುವು ಯೋಜನೆ ವಿರುದ್ಧದ ಚಳವಳಿಗೂ ಸಹಕಾರ ನೀಡಬೇಕು ಎಂದು ಒತ್ತಾಯಿಸಿದರು.
ಕನ್ನಡ ಚಲನಚಿತ್ರಗಳನ್ನು ಕೇವಲ ಬಯಲು ಸೀಮೆಯವರು ಮಾತ್ರ ನೋಡುವುದಲ್ಲ. ದ.ಕ., ಉಡುಪಿ, ಕಾಸರಗೋಡು ಸೇರಿದಂತೆ ಸಮಸ್ತ ತುಳುನಾಡಿನವರು ಚಿತ್ರ ನೋಡಿ ಪ್ರೋತ್ಸಾಹಿಸುತ್ತಾರೆ. ನೇತ್ರಾವತಿ ನದಿ ತಿರುವು ಯೋಜನೆ ವಿರೋಧಿಸಿ ನಡೆಯುತ್ತಿರುವ ಹೋರಾಟಗಳಲ್ಲಿ ಚಿತ್ರರಂಗದವರು ಪಾಲ್ಗೊಳ್ಳಬೇಕು. ವಾರದೊಳಗೆ ಸ್ಪಂದನೆ ದೊರಕದಿದ್ದಲ್ಲಿ ಇಲ್ಲಿ ಕನ್ನಡ ಚಿತ್ರಗಳನ್ನು ಬಹಿಷ್ಕರಿಸುವ ಅನಿವಾರ್ಯತೆ ಎದುರಾಗಬಹುದು ಎಂದು ಅವರು ತಿಳಿಸಿದರು.
ವೇದಿಕೆ ಮುಖಂಡರಾದ ಪ್ರಶಾಂತ್ ರಾವ್, ಹಮೀದ್ ಹಸನ್, ಆನಂದ್ ಅಮೀನ್, ಸಿರಾಜ್, ಶ್ರೀಕಾಂತ್ ಸಾಲ್ಯಾನ್, ರಕ್ಷಿತ್ ಮೊದಲಾದವರು ಉಪಸ್ಥಿತರಿದ್ದರು.







