ಬೈಕ್ಗೆ ಮರಳು ಸಾಗಾಟದ ಲಾರಿ ಢಿಕ್ಕಿ: ಯುವಕರಿಬ್ಬರು ಗಂಭೀರ
ಬಂಟ್ವಾಳದ ಜಕ್ರಿಬೆಟ್ಟುವಿನಲ್ಲಿ ಘಟನೆ
.jpg)
ಬಂಟ್ವಾಳ, ಜೂ.14: ಮರಳು ಸಾಗಾಟದ ಲಾರಿಯೊಂದು ಬೈಕ್‌ಗೆ ಢಿಕ್ಕಿ ಹೊಡೆದ ಪರಿಣಾಮ ಇಬ್ಬರು ಸವಾರರು ಗಂಭೀರ ಗಾಯಗೊಂಡ ಘಟನೆ ಬಂಟ್ವಾಳ ತಾಲೂಕಿನ ಜಕ್ರಿಬೆಟ್ಟು ಎಂಬಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಗುರುವಾಯಣಕೆರೆ ನಿವಾಸಿಗಳಾದ ಸಂತೋಷ್ (22) ಮತ್ತು ಅಶೋಕ್ (21) ಗಂಭೀರವಾಗಿ ಗಾಯಗೊಂಡವರು. ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬೈಕ್ ಸವಾರರು ಬಿ.ಸಿ.ರೋಡಿನಿಂದ ಗುರುವಾಯನಕೆರೆಗೆ ತೆರಳುತ್ತಿದ್ದಾಗ ಜಕ್ರಿಬೆಟ್ಟುವಿನಲ್ಲಿ ವಿರುದ್ಧ ದಿಕ್ಕಿನಲ್ಲಿ ಅತೀ ವೇಗದಲ್ಲಿ ಬಂದ ಮರಳು ತುಂಬಿದ ಲಾರಿ ಢಿಕ್ಕಿ ಹೊಡೆದಿದೆ. ಅಪಘಾತದಿಂದ ಬೈಕ್ ಸವಾರರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು ಗಾಯಾಳುಗಳನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ರವಾನಿಸಿದ್ದಾರೆ.
ಮರಳು ಲಾರಿಗಳನ್ನು ತಡೆದು ಪ್ರತಿಭಟನೆ; ಸ್ಥಳದಲ್ಲಿ ಬಿಗುವಿನ ವಾತಾವರಣ: ಅತಿ ವೇಗವಾಗಿ ಬಂದ ಮರಳು ಸಾಗಾಟದ ಲಾರಿ ಬೈಕ್ಗೆ ಢಿಕ್ಕಿ ಹೊಡೆದು ಸವಾರರಿಬ್ಬರು ಗಾಯಗೊಂಡಿದ್ದರಿಂದ ಆಕ್ರೋಶಗೊಂಡ ಸ್ಥಳೀಯ ಜನರು ಮರಳು ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಈ ಭಾಗದಲ್ಲಿ ಅಕ್ರಮ ಮರಳುಗಾರಿಕೆ ಮಿತಿ ಮೀರಿ ನಡೆಯುತ್ತಿದ್ದು ಮರಳು ಲಾರಿಗಳಿಂದ ದಿನನಿತ್ಯ ಅಪಘಾತಗಳು ಸಂಭವಿಸುತ್ತಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಈ ಸಂದರ್ಭ ಸ್ಥಳದಲ್ಲಿ ಕೆಲಹೊತ್ತು ಬಿಗುವಿನ ವಾತಾವರಣ ಸೃಷ್ಟಿಯಾಯಿತು.
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಬಂಟ್ವಾಳ ಟ್ರಾಫಿಕ್ ಎಸ್ಸೈ ಚಂದ್ರಶೇಖರಯ್ಯ ಹಾಗೂ ಸಿಬ್ಬಂದಿ ಪ್ರತಿಭಟನಾ ನಿರತರನ್ನು ಸಮಾಧಾನಪಡಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.







