ವಿವಾದವನ್ನು ಕೋರ್ಟ್ ಬಗೆಹರಿಸುತ್ತದೆ: ಸಿದ್ದರಾಮಯ್ಯ
ಕಾವೇರಿ ನದಿ ನೀರು ಹಂಚಿಕೆ

ಬೆಂಗಳೂರು, ಜೂ.14: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಕರಣ ನೀಡಿರುವ ತೀರ್ಪನ್ನು ರಾಜ್ಯ ಸರಕಾರ ಹಾಗೂ ತಮಿಳು ನಾಡು ಸರಕಾರಗಳು ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ನೇತೃತ್ವದ ನಿಯೋಗ ಪ್ರಧಾನಿಯನ್ನು ಭೇಟಿ ಮಾಡಿ ಕಾವೇರಿ ನಿರ್ವಹಣಾ ಮಂಡಳಿ ರಚಿಸುವ ಕುರಿತು ಸಲ್ಲಿಸಿರುವ ಮನವಿ ಕುರಿತು ಕೇಳಿದ ಪ್ರಶ್ನೆಗೆ ಗೃಹ ಕಚೇರಿ ಕೃಷ್ಣಾದಲ್ಲಿ ಅವರು ಉತ್ತರಿಸಿದರು.
ಕಾವೇರಿ ನದಿ ನೀರಿನ ಕುರಿತು ನ್ಯಾಯಾಧೀಕರಣದ ತೀರ್ಪನ್ನು ಸುಪ್ರೀಂಕೋರ್ಟ್‌ನಲ್ಲಿ ನಾವು ಪ್ರಶ್ನಿಸಿದ್ದೇವೆ. ನ್ಯಾಯಾಲಯವೆ ವಿವಾದವನ್ನು ಬಗೆಹರಿಸಲಿದೆ ಎಂದು ಅವರು ಹೇಳಿದರು. ಹಲವಾರು ವಿಷಯಗಳ ಕುರಿತು ಚರ್ಚೆ ನಡೆಸುವ ಸಂಬಂಧ ಬುಧವಾರ ಬೆಳಗ್ಗೆ 10.30ಕ್ಕೆ ಮಂತ್ರಿ ಪರಿಷತ್ತು ಸಭೆಯನ್ನು ಕರೆಯಲಾಗಿದೆ. ಸಚಿವ ಸಂಪುಟ ಪುನರ್‌ರಚನೆಗೆ ಕಾಮರಾಜ್ ಸೂತ್ರವೂ ಇಲ್ಲ, ಅಣ್ಣಾದೊರೈ ಸೂತ್ರವು ಇಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.
ವಿಧಾನಪರಿಷತ್ತಿನ ಶಿಕ್ಷಕರು ಮತ್ತು ಪದವೀಧರ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸೋಲಾಗಿದೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡುವಲ್ಲಿ ವಿಳಂಬ ಮಾಡಿದ್ದರಿಂದ ಚುನಾವಣೆಗೆ ಸೂಕ್ತ ಸಿದ್ಧತೆ ಮಾಡಿಕೊಳ್ಳಲು ಆಗಲಿಲ್ಲ. ಇದರಲ್ಲಿ ನಮ್ಮ ತಪ್ಪಿದೆ ಎಂದು ಮುಖ್ಯಮಂತ್ರಿ ಹೇಳಿದರು.
‘ಎರಡು ತಿಂಗಳ ಮುಂಚೆಯೇ ಕಾರು ಬದಲಾವಣೆಗೆ ನಿರ್ಧಾರ’
ಬೆಂಗಳೂರು, ಜೂ.14: ತಮ್ಮ ಸರಕಾರಿ ಕಾರು ಬದಲಾಯಿಸಲು ಎರಡು ತಿಂಗಳ ಹಿಂದೆಯೆ ನಿರ್ಧರಿಸಲಾಗಿತ್ತು. ಈಗ ಕಾರಿಗೂ, ಕಾಗೆಗೂ ಸಂಬಂಧ ಕಲ್ಪಿಸಲಾಗುತ್ತಿದೆ. ಕಾಗೆ ಕುಳಿತುಕೊಂಡಿತು ಎಂಬ ಕಾರಣಕ್ಕೆ ಕಾರು ಬದಲಾಯಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಮಂಗಳವಾರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಬಳಸುತ್ತಿರುವ ಸರಕಾರಿ ಕಾರು ಎರಡು ಲಕ್ಷ ಕಿ.ಮೀ.ಗೂ ಹೆಚ್ಚು ಸಂಚರಿಸಿದೆ. ಜೊತೆಗೆ ತಾಂತ್ರಿಕ ಸಮಸ್ಯೆ ಇದ್ದುದರಿಂದ ಕಾರು ಬದಲಾವಣೆ ಮಾಡಬೇಕಾಯಿತು ಎಂದರು.
ಮೂಢನಂಬಿಕೆಗಳಲ್ಲಿ ನನಗೆ ಯಾವ ನಂಬಿಕೆಯೂ ಇಲ್ಲ. ಒಂದು ವೇಳೆ ಇದ್ದಿದ್ದರೆ ಮುಖ್ಯಮಂತ್ರಿ ಸ್ಥಾನ ಹೋಗುತ್ತದೆ ಎಂಬ ಕಾರಣಕ್ಕೆ ಚಾಮರಾಜನಗರಕ್ಕೆ ಆರು ಬಾರಿ ಹೋಗುತ್ತಿರಲಿಲ್ಲ. ರಾಹುಕಾಲದಲ್ಲಿ ಬಜೆಟ್ ಮಂಡನೆಗೆ ಮುಂದಾಗುತ್ತಿರಲಿಲ್ಲ. ಅಷ್ಟೇ ಏಕೆ, ಅಮಾವಾಸ್ಯೆ ದಿನದಂದು(ಜು.4)ವಿಧಾನಮಂಡಲದ ಅಧಿವೇಶನ ಕರೆಯುತ್ತಿರಲಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ಸರಕಾರ ಇನ್ನಾದರೂ ಜನರ ಬಳಿಗೆ ಹೋಗಲಿ ಎಂಬ ಸ್ಪೀಕರ್ ಕಾಗೋಡು ತಿಮ್ಮಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಬರಗಾಲಕ್ಕೆ ತುತ್ತಾಗಿರುವ 16 ಜಿಲ್ಲೆಗಳಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ್ದೇನೆ. ಯಾವ ಮುಖ್ಯಮಂತ್ರಿಯೂ ಬರಗಾಲದ ಸಂದರ್ಭದಲ್ಲಿ ಇಷ್ಟು ಜಿಲ್ಲೆಗಳಿಗೆ ಹೋಗಿರಲಿಲ್ಲ. ಬರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸುವ ಕೆಲಸವನ್ನು ನಮ್ಮ ಸರಕಾರ ಮಾಡುತ್ತಿದೆ ಎಂದರು.







