ಶಶಿಧರ್‌ಗೆ ಜಾಮೀನು ನಿರಾಕರಿಸಿದ ನ್ಯಾಯಾಲಯ
ರಾಜ್ಯಾದ್ಯಂತ ಪೊಲೀಸ್ ಪ್ರತಿಭಟನೆ ಪ್ರಕರಣ
ಬೆಂಗಳೂರು, ಜೂ.14: ಪೊಲೀಸ್ ಪ್ರತಿಭಟನೆಗೆ ಕುಮ್ಮಕ್ಕು ನೀಡಿದ್ದ ಎನ್ನಲಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧನಕ್ಕೊಳಗಾದ ಶಶಿಧರ್ ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಾದ ಹಿನ್ನೆಲೆಯಲ್ಲಿ ಅವರನ್ನು ಇನ್ನಷ್ಟು ದಿನ ಪೊಲೀಸ್ ಕಸ್ಟಡಿಗೆ ನೀಡಬೇಕೆಂದು ಸರಕಾರಿ ಪರ ವಕೀಲರು ನ್ಯಾಯಪೀಠಕ್ಕೆ ತಿಳಿಸಿದಾಗ ನಗರದ 1ನೆ ಎಸಿಎಂಎಂ ನ್ಯಾಯಾಲಯ ಶಶಿಧರ್ ಅವರನ್ನು ಜೂ.18ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ. ಸಾಮಾಜಿಕ ಕಾರ್ಯಕರ್ತ ಶಶಿಧರ್ ಜಾಮೀನು ಅರ್ಜಿ ಕೋರಿ ಅರ್ಜಿ ಸಲ್ಲಿಸಿದ್ದರು. ಶಶಿಧರ್ ಪೊಲೀಸರ ವಿಚಾರಣೆಗೆ ಸಹಕರಿಸುತ್ತಿಲ್ಲ. ಹೀಗಾಗಿ ಅವರನ್ನು ಮತ್ತೆ ಪೊಲೀಸ್ ಕಸ್ಟಡಿಗೆ ನೀಡುವಂತೆ ಸರಕಾರಿ ವಕೀಲರು ಮನವಿ ಮಾಡಿದರು. ಈ ಹಿನ್ನೆಲೆಯಲ್ಲಿ 18 ರವರೆಗೂ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶಿಸಿದೆ. ಹಾಗೂ ಮನೆಯ ಊಟ ಮತ್ತು ಮನೆಯವರನ್ನು ಭೇಟಿ ಮಾಡಲು ಶಶಿಧರ್‌ಗೆ ನ್ಯಾಯಾಲಯ ಅವಕಾಶ ನೀಡಿದೆ. ಗಂಡ ನಿರಪರಾಧಿ: ನನ್ನ ಗಂಡನನ್ನು ಬಿಟ್ಟು ನನ್ನ ಕುಟುಂಬಕ್ಕೆ ಬೇರೆ ಯಾರು ಆಸರೆ ಇಲ್ಲ. ನನ್ನ ಗಂಡ ನಿರಪರಾಧಿ. ಅವರನ್ನು ರಾಜಕೀಯ ಉದ್ದೇಶದಿಂದ ಬಂಧಿಸಿದ್ದಾರೆ ಎಂದು ಶಶಿಧರ ಪತ್ನಿ ಪೂರ್ಣಿಮಾ ದೂರಿದ್ದಾರೆ. ನನ್ನ ಮಕ್ಕಳ ಕಾಲೇಜ್ ಫೀಸ್ ಕಟ್ಟಲು ನನ್ನ ಹತ್ತಿರ ಹಣ ಇಲ್ಲ. ದಯಮಾಡಿ ನನ್ನ ಗಂಡನನ್ನು ಬಿಟ್ಟು ಬಿಡಿ ಎಂದು ನ್ಯಾಯಾಲಯದಲ್ಲಿ ಶಶಿಧರ್ ಪತ್ನಿ ಪೂರ್ಣಿಮಾ ಕಣ್ಣೀರು ಹಾಕಿದರು.





