ಜ್ಞಾನವನ್ನು ಸಮಾಜಮುಖಿಯಾಗಿ ಬಳಸಿಕೊಳ್ಳಿ: ಸಚಿವ ಕಿಮ್ಮನೆ
ತೀರ್ಥಹಳ್ಳಿ, ಜೂ.14: ಶಾಲೆಯಲ್ಲಿ ಉತ್ತಮ ಲಿತಾಂಶ ಬರುವುದಕ್ಕೆ ವಿದ್ಯಾರ್ಥಿಯ ಪರಿಶ್ರಮದ ಜೊತೆಗೆ ಶಿಕ್ಷಕರು ಹಾಗೂ ಪೋಷಕರ ಪಾತ್ರ ಮಹತ್ವದ್ದು. ಪಡೆದ ಜ್ಞಾನವನ್ನು ಸಮಾಜ ಮುಖಿ ಯಾಗಿ ಬಳಸಿಕೊಳ್ಳಬೇಕು ಎಂದು ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಹೇಳಿದ್ದಾರೆ.
ಪಟ್ಟಣದ ಸರಕಾರಿ ಬಾಲಿಕಾ ಪದವಿಪೂರ್ವ ಕಾಲೇಜಿನ ನೂತನ ಹೆಚ್ಚುವರಿ ಕೊಠಡಿಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾ ಡಿದರು.
ಮಕ್ಕಳಿಗೆ ಪಠ್ಯಕ್ರಮದ ಜೊತೆಗೆ ಸಾಮಾನ್ಯ ಜ್ಞಾನದ ಅರಿವನ್ನು ನೀಡುವ ಜವಾಬ್ದಾರಿ ಶಿಕ್ಷಕರು ಹಾಗೂ ಪೋಷಕರದ್ದಾಗಿದೆ. ಮಕ್ಕಳಲ್ಲಿ ವಿಶಾಲ ಮನೋಭಾವವಿದ್ದು, ಶಿಕ್ಷಕರು, ಪೋಷಕರು ಆದರ್ಶವನ್ನು ಕಲಿಸುವ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ಬೆಳೆಸಿಕೊಳ್ಳಬೇಕು. ಜನರು ಜಾತಿ, ಧರ್ಮವನ್ನು ಮರೆತು ಎಲ್ಲರೂ ಒಂದಾಗಿ ವಿಶಾಲ ಮನಸ್ಥಿತಿ ಹಾಗೂ ಹೃದಯದಿಂದ ಭವಿಷ್ಯದ ಪ್ರಜೆಯನ್ನಾಗಿ ಮಕ್ಕಳನ್ನು ರೂಪಿಸಬೇಕಾಗಿದೆ ಎಂದರು.
ಜಿ.ಪಂ. ಸದಸ್ಯ ಶ್ರೀನಿವಾಸ್ ಮಾತನಾಡಿ, ಶಿಕ್ಷಣ ನಮಗೆ ಕೇವಲ ಅನ್ನವನ್ನು ಮಾತ್ರ ನೀಡುವುದಲ್ಲ. ಸಂಸ್ಕಾರವನ್ನೂ ಕೊಡುತ್ತದೆ. ಮಾನವೀಯ ವೌಲ್ಯಗಳನ್ನು ನಾವು ಶಿಕ್ಷಣದ ಮೂಲಕ ರೂಢಿಸಿಕೊಳ್ಳಬೇಕು ಎಂದರು.
ಈ ಸಮಾರಂಭದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಪ್ರಭಾಕರ್ ಹೆಗ್ಡೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಲಾ ಸಮಿತಿಯ ಅಧ್ಯಕ್ಷ ರಮೇಶ್ ಶೆಟ್ಟಿ, ಸದಸ್ಯರಾದ ನಿರಂಜನ್, ಸೋಮಶೇಖರ್, ಬಿಇಒ ಕೃಷ್ಣಮೂರ್ತಿ, ಉಪ ಪ್ರಾಂಶುಪಾಲ ಗಿರಿರಾಜ್, ಮಾಜಿ ಪಪಂ ಸದಸ್ಯೆ ಪ್ರಭಾವತಿ ಶಾಮಣ್ಣ, ನೌಕರರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ ಉಪಸ್ಥಿತರಿದ್ದರು.







