ಬೆಳೆ ವಿಮಾ ಯೋಜನೆ ಸಂಬಂಧಿ ಸಭೆ
‘ಬೆಳೆ ವಿಮೆ ಬಗ್ಗೆ ರೈತರಲ್ಲಿ ಅರಿವು ಮೂಡಿಸಿ’
ಶಿವಮೊಗ್ಗ, ಜೂ. 14: ಬೆಳೆ ವಿಮೆ ಯೋಜನೆಗೆ ಸಂಬಂಧಿಸಿದಂತೆ ರೈತ ಸಮುದಾಯದಲ್ಲಿ ಜಾಗೃತಿ ಮೂಡಿಸಿ. ರೈತ ಸಂಪರ್ಕ ಕೇಂದ್ರ, ನಾಡ ಕಚೇರಿ ಸೇರಿದಂತೆ ರೈತರು ಹೆಚ್ಚಾಗಿ ಸೇರುವ ಸ್ಥಳಗಳಲ್ಲಿ ವ್ಯಾಪಕ ಪ್ರಚಾರ ನಡೆಸಬೇಕು ಎಂದು ಅಪರ ಜಿಲ್ಲಾಧಿಕಾರಿ ಚನ್ನಬಸಪ್ಪಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೃಷಿ ಮತ್ತು ತೋಟಗಾರಿಕೆ ಬೆಳೆ ವಿಮಾ ಯೋಜನೆಗೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಎಲ್ಲ ರೈತರಿಗೂ ಬೆಳೆ ವಿಮೆ ಸೌಲಭ್ಯ ದೊರಕು ವಂತಾಗಬೇಕು. ಬೆಳೆ ವಿಮಾ ಯೋಜನೆ ನೋಂದಣಿಗೆ ಆಗಮಿಸುವ ರೈತರೊಂದಿಗೆ ಉಡಾಫೆಯಿಂದ ವರ್ತಿಸದೆ ಅವರ ಕೆಲಸಗಳನ್ನು ತ್ವರಿತಗತಿಯಲ್ಲಿ ಮಾಡಿಕೊಡಲು ಬ್ಯಾಂಕ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕೆಂದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಧುಸೂದನ್ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಹಂಗಾಮಿಗೆ ವಿಮಾ ಮೊತ್ತ ನಿಗದಿಪಡಿಸಲಾಗಿದೆ. ನೀರಾವರಿ ಆಶ್ರಯದ ಭತ್ತಕ್ಕೆ ಪ್ರತೀ ಹೆಕ್ಟೇರ್‌ಗೆ 1,640 ರೂ., ಮಳೆ ಆಶ್ರಿತ ಭತ್ತಕ್ಕೆ 720 ರೂ. ನಿಗದಿಪಡಿಸಲಾಗಿದೆ. ಮುಸುಕಿನ ಜೋಳ, ರಾಗಿಗೆ ಹೆಕ್ಟೇರ್‌ವಾರು ವಿಮಾ ಕಂತಿನ ಮೊತ್ತವನ್ನು ನಿಗದಿಪಡಿಸಿದ್ದು, ರೈತರು ಜುಲೈ 30 ರೊಳಗೆ ವಿಮೆ ಮಾಡಿಸಿಕೊಳ್ಳಬೇಕು ಎಂದು ಸೂಚಿಸಿದರು.
ಬೆಳೆ ಹಾಳಾದ ಸಂದರ್ಭದಲ್ಲಿ ಮಾತ್ರವಲ್ಲದೆ, ಕಟಾವಿನ ಬಳಿಕವೂ ವಿಮೆ ಒಳಗೊಳ್ಳಲಿದೆ. ವಿಮಾ ಇಂಡೆಮ್ನಿಟಿ ಮೊತ್ತವನ್ನು ನೀರಾವರಿ ಬೆಳೆಗಳಿಗೆ ಶೇ. 90, ಮಳೆಯಾಶ್ರಿತ ಬೆಳೆಗಳಿಗೆ ಶೇ. 80 ರಷ್ಟು ನಿಗದಿಪಡಿಸಲಾಗಿದೆ ಎಂದರು. ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆಯನ್ನು ಜಾರಿಗೆ ತರಲಾಗಿದ್ದು, ಅಡಿಕೆ ಮತ್ತು ಶುಂಠಿಗೆ ಅನ್ವಯವಾಗುತ್ತದೆ. ಪ್ರತೀ ಹೆಕ್ಟೇರ್ ಅಡಿಕೆಗೆ 1,16,200 ರೂ. ವಿಮಾ ಮೊತ್ತ, ಶುಂಠಿಗೆ 1,03,750 ರೂ. ವಿಮಾ ಮೊತ್ತ ಇದೆ. ಇದರಲ್ಲಿ ಶೇ. 15 ಕ್ಲೈಮ್‌ವಿಮೆ ಪಾವತಿಸಬೇಕು. ಅದರಲ್ಲಿ ಶೇ. 5 ರಷ್ಟು ರೈತರು, ಉಳಿದ ಹಣವನ್ನು ಕೇಂದ್ರ ಹಾಗೂ ರಾಜ್ಯ ಸರಕಾರ ಭರಿಸಲಿದೆ. ರೈತರು ಪ್ರತೀ ಹೆಕ್ಟೇರ್‌ಗೆ 5,800 ರೂ. ಪಾವತಿಸಬೇಕು. ಜೂನ್ 30 ಕೊನೆಯ ದಿನವಾಗಿದೆ ಎಂದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ಕೃಷ್ಣಮೂರ್ತಿ ಉಪಸ್ಥಿತರಿದ್ದರು.







