ಸರಕಾರಿ ಉರ್ದು ಶಾಲಾ ಕಟ್ಟಡ ಪರಿಶೀಲನೆ

ಸೊರಬ, ಜೂ.14: ಪಟ್ಟಣದ ಚಿಕ್ಕಪೇಟೆಯ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ಅಲ್ಪಸಂಖ್ಯಾತರ ಆಯೋಗದ ರಾಜ್ಯಾಧ್ಯಕ್ಷೆ ಬಲ್ಕೀಸ್ ಬಾನು ಭೇಟಿ ನೀಡಿ ಶಾಲಾ ಕಟ್ಟಡದ ದುಸ್ಥಿತಿಯನ್ನು ಪರಿಶೀಲಿಸಿದರು.
ಈ ಸಂದಭರ್ದಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ತಸ್ಲೀಮ್ ಅಹಮದ್ ಮಾತನಾಡಿ, ಈ ಶಾಲೆ ಶತಮಾನದ ಅಂಚಿನಲ್ಲಿರುವ ಭಾಷಾ ಅಲ್ಪಸಂಖ್ಯಾತರ ಶಾಲೆಯಾಗಿದ್ದು, ಕುಡಿಯುವ ನೀರು, ಶೌಚಾಲಯ, ಶಿಥಿಲಗೊಂಡ ಕಟ್ಟಡ ಮೊದಲಾದ ಮೂಲಭೂತ ಸೌಕರ್ಯದಿಂದ ವಂಚಿತವಾಗಿದೆ. ಈ ಕಾರಣದಿಂದ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದರು. 115 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಶಾಲೆಯ ಶಿಥಿಲಗೊಂಡ ಕಟ್ಟಡವನ್ನು ತೆರವುಗೊಳಿಸಿ, ನೂತನ ಕಟ್ಟಡ ನಿರ್ಮಾಣಕ್ಕೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳಿಗೆ ತಿಳಿಸಿದ್ದರು. ಈ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಸಂಬಂಧಪಟ್ಟ ಇಲಾಖಾ ಮೇಲಾಧಿಕಾರಿಗಳ ಗಮನಕ್ಕೆ ತರುವುದರ ಜೊತೆಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಅನುದಾನ ಬಿಡುಗಡೆ ಮಾಡಿ ಪುನಶ್ಚೇತನಗೊಳಿಸುವಂತೆ ಮನವಿ ಮಾಡಿದರು. ಆನಂತರ ಪ್ರತಿಕ್ರಿಯಿಸಿದ ಬಲ್ಕೀಸ್ ಬಾನು,ಸರಕಾರ ಅಲ್ಪಸಂಖ್ಯಾತ ಮಕ್ಕಳ ಶಿಕ್ಷಣಕ್ಕಾಗಿ ಸಾಕಷ್ಟು ಅನುಕೂಲಗಳನ್ನು ಕಲ್ಪಿಸಿದೆ ಮತ್ತು ಶಾಲೆಗಳ ಕಟ್ಟಡಗಳು ಹಾಗೂ ವಿದ್ಯಾರ್ಥಿ ನಿಲಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದೆ. ಈ ಬಗ್ಗೆ ಇಲಾಖಾ ಅಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವಂತೆ ಸೂಚಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ ಪಜ್ಲುನ್ನಿಸಾ, ಸದಸ್ಯರಾದ ಸೈಯದ್ ಸಿರಾಜ್, ಆರೀಫ್ ಉಲ್ಲಾ, ಮಾಜಿ ಅಧ್ಯಕ್ಷ ಮುಹಮ್ಮದ್ ಆರೀಫ್, ಪಪಂ ಸದಸ್ಯ ಸುಜಾಯತ್ ಉಲ್ಲಾ, ಮುಖಂಡರಾದ ಸೈಯದ್ ನಝೀರ್, ಎನ್. ನೂರ್ ಅಹ್ಮದ್, ಉರ್ದು ಇಸಿಒ. ಬಶೀರ್ ಕೋಡ್, ಸಿಆರ್‌ಪಿಗಳಾದ ಆಪ್ಸರ್, ಶಫಿ ಅಹ್ಮದ್, ಮುಖ್ಯ ಶಿಕ್ಷಕಿ ಶಾಹಿದಾ ಬೇಗಂ ಮತ್ತಿತರರು ಉಪಸ್ಥಿತರಿದ್ದರು.





