ಶಿವಮೊಗ್ಗ ನಗರದಲ್ಲಿ ಹೆಚ್ಚುತ್ತಿದೆ ಬೀದಿ ಕಾಮಣ್ಣರ ಹಾವಳಿ
ಗಮನಹರಿಸುವರೇ ಪೊಲೀಸರು?
ಶಿವಮೊಗ್ಗ,ಜೂ.14: ಇತ್ತೀಚೆಗೆ ಶಿವಮೊಗ್ಗ ನಗರದಲ್ಲಿ ಬೀದಿ ಕಾಮಣ್ಣರ ಹಾವಳಿ ವಿಪರೀತ ಮಟ್ಟಕ್ಕೆ ತಲುಪಿದ್ದು ಶಾಲಾ-ಕಾಲೇಜು ವಿದ್ಯಾರ್ಥಿನಿಯರು, ಯುವತಿಯರು, ಮಹಿಳೆಯರು ತೀವ್ರ ಕಿರಿಕಿರಿ ಎದುರಿಸುತ್ತಿದ್ದಾರೆ. ಈ ಕುರಿತಂತೆ ಸಾರ್ವಜನಿಕ ವಲಯದಿಂದ ವ್ಯಾಪಕ ದೂರುಗಳು ಕೇಳಿಬರುತ್ತಿವೆ. ಪೊಲೀಸರು ಬೀದಿ ಕಾಮಣ್ಣರ ಹಾವಳಿಗೆ ಕಡಿ ವಾಣ ಹಾಕಬೇಕು. ಯುವತಿ-ಮಹಿಳೆಯರು ನಗರದ ರಸ್ತೆಗಳಲ್ಲಿ ಮುಕ್ತವಾಗಿ ಓಡಾಡುವಂತೆ ಮಾಡಬೇಕು. ವಿಶೇಷವಾಗಿ ಶಾಲಾ-ಕಾಲೇಜುಗಳಿಗೆ ತೆರಳುವ ಹಾಗೂ ಬಿಡುವ ಸಮಯದಲ್ಲಿ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಗಸ್ತು ವ್ಯವಸ್ಥೆ ಹೆಚ್ಚಿಸಬೇಕು ಎಂದು ಕೆಲ ಪೋಷಕರು ಪೊಲೀಸ್ ಇಲಾಖೆಗೆ ಆಗ್ರಹಿಸಿರುವುದಾಗಿ ತಿಳಿದು ಬಂದಿದೆ. ಶಾಲಾ ಕಾಲೇಜುಗಳು, ಬಸ್ ನಿಲ್ದಾಣಗಳು, ಪ್ರಮುಖ ರಸ್ತೆ, ಫುಟ್‌ಪಾತ್‌ಗಳಲ್ಲಿ ಬೀಡುಬಿಡುವ ಪುಂಡರು ಯುವತಿ-ಮಹಿಳೆಯರನ್ನು ಚುಡಾಯಿಸುವುದು, ಅಸಭ್ಯ ಮಾತುಗಳಿಂದ ಕರೆಯುವುದು, ಹಿಂಬಾಲಿಸುವುದು ಸೇರಿದಂತೆ ನಾನಾ ರೀತಿಯ ಉಪಟಳ ನೀಡುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ. ಅದೆಷ್ಟೋ ಯುವತಿಯರು, ವಿದ್ಯಾರ್ಥಿನಿಯರು ಭಯದಿಂದ ಪುಂಡರ ಉಪಟಳ ಪ್ರಶ್ನಿಸಲು ಹೋಗುತ್ತಿಲ್ಲ. ಮನೆಯಲ್ಲಿ ತಿಳಿಸಿದರೆ ಎಲ್ಲಿ ಸಮಸ್ಯೆ ಸೃಷ್ಟಿಯಾಗುವುದೋ, ಅರ್ಧಕ್ಕೆ ವಿದ್ಯಾಭ್ಯಾಸ ನಿಲ್ಲಿಸಿ ಬಿಡುತ್ತಾರೋ ಎಂಬ ಕಾರಣದಿಂದ ಮನೆಯವರಿಗೂ ಹೇಳುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಪುಂಡರು ತಮ್ಮ ಕುಕೃತ್ಯ ನಡೆಸುತ್ತಿದ್ದಾರೆ ಎಂದು ನಾಗರತ್ನ ಎಂಬ ಗೃಹಿಣಿ ದೂರುತ್ತಾರೆ. ಮತ್ತೆ ಕೆಲ ಪುಂಡರು ಹದಿಹರೆಯದ ವಯಸ್ಸಿನ ಶಾಲಾ-ಕಾಲೇಜು ಬಾಲಕಿಯರನ್ನು ಪ್ರೀತಿ-ಪ್ರೇಮದ ಬಲೆಗೆ ಬೀಳಿಸಿಕೊಂಡು ಅವರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಮತ್ತೆ ಕೆಲ ಬೀದಿ ಕಾಮಣ್ಣರು ಕಾಲೇಜುಗಳ ಕ್ಯಾಂಪಸ್ ಆವರಣದಲ್ಲಿಯೇ ವಿದ್ಯಾರ್ಥಿಯರಿಗೆ ತೊಂದರೆ ಕೊಡುವ ಕೆಲಸ ನಡೆಸುತ್ತಿದ್ದಾರೆ. ಈ ಬಗ್ಗೆ ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಪೊಲೀಸ್ ಇಲಾಖೆ ಹಾಗೂ ನಾಗರಿಕ ಸಂಘಟನೆಗಳು ಮಾಡಬೇಕಾಗಿದೆ ಎಂದು ಪೋಷಕರೊಬ್ಬರು ಹೇಳುತ್ತಾರೆ. ನಗರದ ಮಹಾವೀರ ವೃತ್ತ, ತಹಶೀಲ್ದಾರ್ ಕಚೇರಿ ಎದುರಿನ ಬಸ್ ನಿಲ್ದಾಣ, ಮಥುರಾ ಪ್ಯಾರಡೈಸ್ ಸಮೀಪದ ರಸ್ತೆ, ಗೋಪಿ ವೃತ್ತ ಸುತ್ತಮುತ್ತಲು, ನೆಹರೂ ರಸ್ತೆ, ಡಿ.ವಿ.ಎಸ್. ಕಾಲೇಜು ವೃತ್ತ, ಡಿಡಿಪಿಐ ಕಚೇರಿ ಮುಂಭಾಗದ ಬಸ್ ನಿಲ್ದಾಣ, ಕೆ.ಆರ್.ಪುರಂ ರಸ್ತೆ, ಎ.ಎ. ವೃತ್ತ, ಸೈನ್ಸ್ ಮೈದಾನ, ಗಾಂಧಿ ಉದ್ಯಾನವನ ಮುಂಭಾಗದ ಬಸ್ ನಿಲ್ದಾಣ ಸೇರಿದಂತೆ ಇನ್ನೂ ಹಲ
ವೆಡೆ ಪುಂಡರ ಉಪಟಳವಿರುವ ಬಗ್ಗೆ ಮಾಹಿತಿಗಳು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಈ ಹಿಂದೆ ಪುಂಡರ ಪತ್ತೆಗಾಗಿಯೇ ಪ್ರಮುಖ ರಸ್ತೆ, ಶಾಲಾ-ಕಾಲೇಜುಗಳ ಬಳಿ ಮಫ್ತಿಯಲ್ಲಿ ಮಹಿಳಾ ಪೊಲೀಸರು ಕಾರ್ಯಾಚರಿಸುತ್ತಿದ್ದರು. ಅದೆಷ್ಟೋ ಬಾರಿ ವಿದ್ಯಾರ್ಥಿನಿಯರು, ಯುವತಿಯರ ಬೆನ್ನು ಬೀಳುತ್ತಿದ್ದ ಪುಂಡರನ್ನು ಪತ್ತೆ ಹಚ್ಚಿ ತಕ್ಕ ಶಾಸ್ತಿ ಕೂಡ ಮಾಡಿದ್ದರು. ಇದರಿಂದ ಭಯಭೀತರಾಗಿದ್ದ ಪುಂಡರು ತಮ್ಮ ಕುಕೃತ್ಯಕ್ಕೆ ಬ್ರೇಕ್ ಹಾಕಿದ್ದರು. ನಗರದ ಪ್ರಮುಖ ಶಾಲಾ-ಕಾಲೇಜು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ಓಡಾಡುವ ಮುಖ್ಯ ರಸ್ತೆಗಳು, ಬಸ್ ನಿಲ್ದಾಣಗಳ ಬಳಿ ಆಗಾಗ್ಗೆ ಮಫ್ತಿ ಪೊಲೀಸರನ್ನು ನಿಯೋಜಿಸಬೇಕು. ಈ ಮೂಲಕ ಬೀದಿ ಕಾಮಣ್ಣರ ಪತ್ತೆ ಹಚ್ಚುವ ಕೆಲಸ ಮಾಡಬೇಕು ಎಂದು ಪೊಲೀಸ್ ಇಲಾಖೆಗೆ ನಾಗರಿಕರು ಒತ್ತಾಯಿಸಿದ್ದಾರೆ.







