ಸಮಸ್ಯೆಗಳ ಸುಳಿಯಲ್ಲಿ ಚಿಕ್ಕಮಗಳೂರು ಜಿಲ್ಲಾಸ್ಪತ್ರೆ
ಹತೋಟಿಗೆ ಬಾರದ ಸಾಂಕ್ರಾಮಿಕ ರೋಗಗಳು
ಚಿಕ್ಕಮಗಳೂರು, ಜೂ.14: ತಾಲೂಕಿನ ವಿವಿಧೆಡೆ ಹಾಗೂ ಜಿಲ್ಲಾ ಕೇಂದ್ರದಲ್ಲಿ ಸಾಂಕ್ರಾಮಿಕ ರೋಗ ಉಲ್ಬಣಗೊಂಡಂತೆ, ನಗರದ ಸರಕಾರಿ ಆಸ್ಪತ್ರೆಯಲ್ಲಿ ಪ್ರತಿ ನಿತ್ಯ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಹೊರ ರೋಗಿಗಳ ವಿಭಾಗದಲ್ಲಿ ರೋಗಿಗಳ ಸರತಿಯ ಸಾಲು ಹನುಮಂತನ ಬಾಲದಂತೆ ಬೆಳೆಯುತ್ತಲೆ ಇದೆ.
ಒಳ ರೋಗಿಗಳ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದ ಮಲ್ಲೇಗೌಡ ಸ್ಮಾರಕ ಸರಕಾರಿ ಆಸ್ಪತ್ರೆಯಲ್ಲಿ ಹಾಸಿಗೆಗಳ ಕೊರತೆ ಉಂಟಾಗಿದೆ. ಒಳ ರೋಗಿಗಳು ಹಾಸಿಗೆಗಳ ಕೊರತೆಯ ಪರಿಣಾಮ ನೆಲದ ಮೇಲೆ ಚಾಪೆ ಹಾಕಿ ಚಿಕಿತ್ಸೆ ಪಡೆಯುವಂತಾಗಿದ್ದು, ಈ ನಡುವೆ ಹೊರಗಿನಿಂದ ಖರೀದಿಸಿದ ಹಾಸಿಗೆಗಳನ್ನು ತಂದು ರೋಗಿಗಳಿಗೆ ನೀಡುತ್ತಿರುವುದಾಗಿ ಜಿಲ್ಲಾ ಸರ್ಜನ್ ಡಾ.ನಾಗೇಂದ್ರ ಮಾಹಿತಿ ನೀಡಿದ್ದಾರೆ.
ಕಳೆದ ಎರಡು ತಿಂಗಳಿನಿಂದಲೂ ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಸಹಿತ ತಾಲೂಕಿನ ವಿವಿಧ ಭಾಗಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡಿರುವ ಭೀತಿ ವ್ಯಕ್ತವಾಗಿದೆ. ಆಲ್ದೂರು ಸಂತೆ ಮೈದಾನದ ಸುತ್ತಮುತ್ತಲ ಬಡಾವಣೆಯಲ್ಲಿ ಹಲವರಿಗೆ ಜ್ವರ ಕಾಣಿಸಿಕೊಂಡಿದೆ. ರೋಗ ಉಪಶಮನಕ್ಕಾಗಿ 30ರಿಂದ 40ಮಂದಿ ರೋಗಿಗಳು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸ್ಥಳಕ್ಕೆ ಜಿಲ್ಲಾಸ್ಪತ್ರೆ ಸಹಿತ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಕೀಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಭಾಗದಲ್ಲಿ ಡೆಂಗ್ ಮತ್ತು ಚಿಕುನ್‌ಗುನ್ಯಾ ರೋಗಗಳು ವ್ಯಾಪಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಜನರಲ್ಲಿ ಸಾಮೂಹಿಕ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಜ್ವರವು ಈತನಕ ಸಂಪೂರ್ಣ ಹತೋಟಿಗೆ ಬಾರದಿರುವುದು ವೈದ್ಯಕೀಯ ಇಲಾಖೆಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಮಂಗಳವಾರ ಜಿಲ್ಲಾ ಆಸ್ಪತ್ರೆಯಲ್ಲಿ ಸುಮಾರು 400ಕ್ಕೂ ಅಧಿಕ ಒಳ ರೋಗಿಗಳು ಚಿಕಿತ್ಸೆಗೆ ದಾಖಲಾಗಿದ್ದು, ಇವರಲ್ಲಿ ಶೇ. 75ಕ್ಕೂ ಅಧಿಕ ಮಂದಿ ಜ್ವರ, ಚಿಕುನ್ ಗುನ್ಯಾ, ಡೆಂಗ್‌ನಂತಹ ಜ್ವರದಿಂದ ಬಳಲುತ್ತಿದ್ದಾರೆ. ನಿತ್ಯ ಜ್ವರ ಸಂಬಂಧಿ ರೋಗದ ಹಿನ್ನೆಲೆ ಸುಮಾರು 200ಕ್ಕೂ ಅಧಿಕ ರೋಗಿಗಳು ಜಿಲ್ಲಾಸ್ಪತ್ರೆಗೆ ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ. ರೋಗಿಗಳ ಪ್ರಮಾಣ ಹೆಚ್ಚುತ್ತಿರುವಂತೆ ಇಲ್ಲಿ ವೈದ್ಯರ ಕೊರತೆ ಕಂಡು ಬರುತ್ತಿದೆ.
ಅಲ್ಲದೆ ಸಾಂಕ್ರಾಮಿಕ ರೋಗಗಳು ವ್ಯಾಪಿಸಲು ಅಸುರಕ್ಷಿತ ಪರಿಸರ, ಶುಚಿತ್ವ ಕಾಪಾಡದಿರುವುದು ಮೂಲ ಕಾರಣವಾಗಿದ್ದು, ಎಲ್ಲೆಡೆಯೂ ಸೊಳ್ಳೆಗಳ ಕಾಟ ತಾರಕಕ್ಕೇರಿದೆ. ಸೊಳ್ಳೆಗಳ ಹತೋಟಿಗೆ ಪ್ರಯತ್ನಿಸದಿ ರುವುದು ರೋಗ ಉಲ್ಪಣಗೊಳ್ಳಲು ಮತ್ತೊಂದು ಕಾರಣವಾಗಿದೆ.
ಜಿಲ್ಲಾಸ್ಪತ್ರೆಯ ಜನರಲ್ ವಾರ್ಡಿನಲ್ಲಿ ಬಹುತೇಕ ಡೆಂಗ್ ಮತ್ತು ಚಿಕುನ್‌ಗುನ್ಯಾ ಕಾಯಿಲೆಯಿಂದ ಬಳಲುತ್ತಿ ರುವವರನ್ನು ದಾಖಲಾಗಿದ್ದಾರೆ. ಅವರಲ್ಲ್ಲಿ ಬಹುಪಾಲು ಮಂದಿ ನಗರಸಭಾ ಕಾರ್ಮಿಕರಾಗಿದ್ದು, ನಗರವನ್ನು ಸ್ವಚ್ಛಗೊಳಿಸುವ ಈ ಸಿಬ್ಬಂದಿ ಅಗತ್ಯ ಮುಂಜಾಗೃತಾ ಪರಿಕರ ಬಳಸದಿರುವುದರಿಂದ ಸಾಂಕ್ರಾಮಿಕ ಕಾಯಿಲೆಗೆ ಒಳಗಾಗಿದ್ದಾರೆ. ನಗರದಲ್ಲಿ ಅವರ ಆರೋಗ್ಯ ರಕ್ಷಣೆ ಬಗ್ಗೆ ನಿರ್ಲಕ್ಷ್ಯ ತೋರಿರುವ ಪರಿಣಾಮ ಕಾರ್ಮಿಕರ ಇಡಿ ಕುಟುಂಬಗಳು ರೋಗಕ್ಕೆ ತುತ್ತಾಗಿದೆ ಎಂಬ ಆರೋಪಗಳಿವೆ.
ನಗರದ ನಿರ್ದಿಷ್ಟ ಬಡಾವಣೆಗಳಲ್ಲಿ ಹೆಚ್ಚು ಮಂದಿಯಲ್ಲಿ ಸಾಂಕ್ರಾಮಿಕ ರೋಗ ಕಾಣಿಸಿಕೊಳ್ಳುತ್ತಿದೆ. ಶಂಕರಪುರ, ಶಾಂತಿನಗರ ಮುಂತಾದ ಬಡಾವಣೆಗಳಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಿಸುತ್ತಿದೆ
ಕಳೆದ ಮೇ ಮತ್ತು ಜೂನ್ ತಿಂಗಳಿನಿಂದ ಇಂದಿನವರೆಗೆ ಸುಮಾರು ಒಂದು ಸಾವಿರ ಮಂದಿ ಒಳರೋಗಿಗಳಾಗಿ ದಾಖಲಾಗಿದ್ದಾರೆ. ಅವರಲ್ಲಿ ಬಹುಪಾಲು ಮಂದಿ ಸಾಂಕ್ರಾಮಿಕ ಕಾಯಿಲೆಗ ಒಳಗಾದವರು. ಕಳೆದ ಮೇ ತಿಂಗಳಲ್ಲಿ 14ಮಂದಿ ಚಿಕುನ್‌ಗುನ್ಯಾ ರೋಗಕ್ಕೆ ಒಳಗಾಗಿದ್ದರೆ 9ಮಂದಿಗೆ ಡೆಂಗ್ ಜ್ವರ ತಗುಲಿತ್ತು. ಜೂನ್ ತಿಂಗಳಲ್ಲಿ 41ಮಂದಿಗೆ ಡೆಂಗ್ಯೂ ತಗುಲಿದ್ದರೆ 26ಮಂದಿ ಚಿಕುನ್‌ಗುನ್ಯಾದಿಂದ ಬಳಲು ತ್ತಿದ್ದಾರೆ. ಅವರಲ್ಲಿ ಓರ್ವ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆಂದು ಜಿಲ್ಲಾಸ್ಪತ್ರೆಯ ಪ್ರಭಾರ ಜಿಲ್ಲಾ ಸರ್ಜನ್ ಡಾ.ನಾಗೇಂದ್ರ ಹೇಳಿದ್ದಾರೆ.







