ಪಟ್ಟಣಗಳನ್ನು ಬಯಲು ಶೌಚಾಲಯ ಮುಕ್ತವಾಗಿಸಲು ಎಡಿಸಿ ಕರೆ

ಚಿಕ್ಕಮಗಳೂರು, ಜೂ.14: ಜಿಲ್ಲೆಯಲ್ಲಿರುವ ಎಲ್ಲ ಪಟ್ಟಣಗಳು ಮತ್ತು ನಗರಗಳನ್ನು ಬಯಲು ಶೌಚಾಲಯ ಮುಕ್ತ ಪ್ರದೇಶಗಳನ್ನಾಗಿ ಮಾಡಲು ಅಧಿಕಾರಿಗಳು ಮುಂದಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಎಂ.ಎಲ್ ವೈಶಾಲಿ ಕರೆ ನೀಡಿದರು.
ಅವರು ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸ್ವಚ್ಛ ಭಾರತ ಅಭಿಯಾನ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯನ್ನು ಬಯಲು ಶೌಚಾಲಯ ರಹಿತ ಜಿಲ್ಲೆಯನ್ನಾಗಿ ಮಾಡುವುದು ಅತ್ಯಂತ ಅಗತ್ಯ. 2011ನೆ ಗಣತಿ ಅನ್ವಯ ಜಿಲ್ಲೆಯ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ 5,246ಮನೆಗಳಲ್ಲಿ ಶೌಚಾಲಯ ವ್ಯವಸ್ಥೆ ಹೊಂದಿರಲಿಲ್ಲ ಆದರೆ, ಶೌಚಾಲಯದ ನಿರ್ಮಾಣಕ್ಕೆ ಸರಕಾರದ ಅನುದಾನ ಕೋರಿ 1994ಅರ್ಜಿಗಳನ್ನು ಸಲ್ಲಿಸಿದ್ದರೆ ಅವುಗಳಲ್ಲಿ 1785ಕ್ಕೆ ಅನುಮೋದನೆ ದೊರೆತು ಕೇವಲ 151ಮಾತ್ರ ಸಂಪೂರ್ಣವಾಗಿ ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗಿವೆ. ಬಾಕಿ ಉಳಿದವುಗಳನ್ನು ಶೀಘ್ರದಲ್ಲಿ ಪೂರ್ಣಗೊಳಿಸಲು ಅಗತ್ಯ ಕ್ರಮಗಳನ್ನು ಅಧಿಕಾರಿಗಳು ಕೈಗೊಳ್ಳಬೇಕು ಎಂದು ಸೂಚಿಸಿದರು.
ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಸೇರಿದಂತೆ ಮತ್ತಿತರೆ ಪ್ಲಾಸ್ಟಿಕ್ ವಸ್ತುಗಳ ದೈನಂದಿನ ದಿನಗಳಲ್ಲಿ ಬಳಕೆಯಿಂದಾಗಿ ಅವುಗಳ ತ್ಯಾಜ್ಯ ಪರಿಸರಕ್ಕೆ ಹಾನಿಯಾಗುವುದರ ಜೊತೆ ಆರೋಗ್ಯಕ್ಕೂ ಮಾರಕವಾಗುತ್ತಿರುವ ಹಿನ್ನೆಲೆಯಲ್ಲಿ ಇವುಗಳ ಸಂಪೂರ್ಣ ಬಳಕೆ ನಿಷೇಧಿಸಲಾಗಿದೆ. ಆದರೂ ಸಹ ನಗರದ ಕೆಲವು ಅಂಗಡಿ ಮುಂಗಟ್ಟುಗಳಲ್ಲಿ ಇವುಗಳ ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಇದಕ್ಕೆ ಕಡಿವಾಣ ಹಾಕಲು ಅಧಿಕಾರಿಗಳು ಮುಂದಾಗಲು ಸೂಚನೆ ನೀಡಿದರು.
ನಗರ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವುದರಿಂದ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹು ದಾಗಿದ್ದು, ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದರು.
ನಗರ ಸಭಾ ಅಧ್ಯಕ್ಷ ದೇವರಾಜ್ ಶೆಟ್ಟಿ, ಕೊಪ್ಪ, ಪಪಂ ಅಧ್ಯಕ್ಷೆ ಕೆ.ಮಾಲತಿ, ಬೀರೂರಿನ ಪಪಂ ಅಧ್ಯಕ್ಷೆ ಮಮತಾ, ಮೂಡಿಗೆರೆ ಪಪಂ ಅಧ್ಯಕ್ಷೆ ಆರ್.ಪಾರ್ವತಮ್ಮ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಪಲ್ಲವಿ ಕೆ.ಆರ್, ಕ್ಷೇತ್ರ ಶಿಕ್ಷಣಾಧಿಕಾರಿಗಳು, ವಿವಿಧ ಪಪಂ ಮುಖ್ಯಾಧಿಕಾರಿಗಳು ಮತ್ತಿತರರು ಉಪಸ್ಥಿತರಿದ್ದರು.







