ಜೂ.24 ರಂದು ಟೀಮ್ ಇಂಡಿಯಾ ಕೋಚ್ ಆಯ್ಕೆ?
ಹೊಸದಿಲ್ಲಿ, ಜೂ.14: ಬಿಸಿಸಿಐ ಕಾರ್ಯಕಾರಿಣಿ ಸಮಿತಿ ಜೂ.24 ರಂದು ಧರ್ಮಶಾಲಾದಲ್ಲಿ ಸಭೆ ಸೇರಲಿದ್ದು, ಈ ವೇಳೆ ಭಾರತೀಯ ತಂಡಕ್ಕೆ ಪ್ರಮುಖ ಕೋಚ್ ನೇಮಕ ಸೇರಿದಂತೆ ಹಲವು ವಿಷಯಗಳ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ.
ಇದೊಂದು ಸಾಮಾನ್ಯ ಕಾರ್ಯಸೂಚಿಯಾಗಿದ್ದು, ಭಾರತೀಯ ತಂಡ ವೆಸ್ಟ್‌ಇಂಡೀಸ್‌ಗೆ ತೆರಳುವ ಮೊದಲು ಹೊಸ ಕೋಚ್ ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.
ಕ್ರಿಕೆಟ್ ಮಂಡಳಿಯು ಪ್ರಮುಖ ಕೋಚ್ ಹುದ್ದೆಗೆ ತನ್ನ ವೆಬ್‌ಸೈಟ್‌ನ ಮೂಲಕ ಅರ್ಜಿಯನ್ನು ಆಹ್ವಾನಿಸಿದ್ದು, ಭಾರತದ ಮಾಜಿ ನಾಯಕ ಅನಿಲ್ ಕುಂಬ್ಳೆ, ಮಾಜಿ ಟೀಮ್ ಡೈರೆಕ್ಟರ್ ರವಿ ಶಾಸ್ತ್ರಿ ಹಾಗೂ ಹಾಲಿ ಆಯ್ಕೆ ಸಮಿತಿಯ ಅಧ್ಯಕ್ಷ ಸಂದೀಪ್ ಪಾಟೀಲ್ ಸಹಿತ ಒಟ್ಟು 57 ಅರ್ಜಿಗಳು ಸಲ್ಲಿಕೆಯಾಗಿದ್ದವು.
2014ರಲ್ಲಿ ಭಾರತ ತಂಡ ಇಂಗ್ಲೆಂಡ್ ಪ್ರವಾಸ ಕೈಗೊಂಡ ಬಳಿಕ ಝಿಂಬಾಬ್ವೆಯ ಡಂಕನ್ ಫ್ಲೆಚರ್ ಅವರಿಂದ ತೆರವಾದ ಪ್ರಮುಖ ಕೋಚ್ ಹುದ್ದೆಗೆ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಬಿಸಿಸಿಐ ಅಂತಿಮ ಪಟ್ಟಿಯನ್ನು ಇನ್ನಷ್ಟೇ ಸಿದ್ಧಪಡಿಸಬೇಕಾಗಿದೆ.
ಕಾರ್ಯಕಾರಿಣಿ ಸಮಿತಿಯು ಪ್ರಮುಖ ಕೋಚ್‌ರನ್ನು ಆಯ್ಕೆ ಮಾಡುವುದಲ್ಲದೆ, ಕ್ರಿಕೆಟ್ ಮಂಡಳಿಯ ತಾಂತ್ರಿಕ ಸಮಿತಿ ಶಿಫಾರಸು ಮಾಡಿದಂತೆ ರಣಜಿ ಟ್ರೋಫಿ ಪಂದ್ಯಗಳನ್ನು ತಟಸ್ಥ ಸ್ಥಳದಲ್ಲಿ ಆಯೋಜಿಸುವ ಕುರಿತಂತೆಯೂ ನಿರ್ಧಾರ ಕೈಗೊಳ್ಳಲಿದೆ.







