ಕನೇರಿಯಾಗೆ ತಾರತಮ್ಯ ಎಸಗಿಲ್ಲ:ಪಿಸಿಬಿ

ಕರಾಚಿ, ಜೂ.14: ‘‘ಕನೇರಿಯಾ ಹಿಂದೂ ಧರ್ಮಕ್ಕೆ ಸೇರಿದವರೆಂಬ ಕಾರಣಕ್ಕೆ ಮಂಡಳಿಯು ಯಾವುದೇ ತಾರತಮ್ಯ ನೀತಿ ಅನುಸರಿಸಿಲ್ಲ. ಧರ್ಮದ ಆಧಾರದಲ್ಲಿ ತಾರತಮ್ಯ ಎಸಗಿದ್ದರೆ ಅವರಿಗೆ ಪಾಕ್ ತಂಡದಲ್ಲಿ ಒಂದೂ ಪಂದ್ಯ ಆಡಲು ಸಾಧ್ಯವಾಗುತ್ತಿರಲಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ನಿಷೇಧ ಎದುರಿಸುತ್ತಿರುವ ಲೆಗ್ ಸ್ಪಿನ್ನರ್ ಡ್ಯಾನಿಶ್ ಕನೇರಿಯಾ ವಿರುದ್ಧ ಕಿಡಿಕಾರಿದೆ.
‘‘ಕನೇರಿಯಾ ಓರ್ವ ಹಿಂದೂವಾಗಿದ್ದರೂ ಪಾಕ್ ತಂಡದಲ್ಲಿ 61 ಟೆಸ್ಟ್ ಹಾಗೂ 18 ಏಕದಿನ ಪಂದ್ಯಗಳನ್ನು ಆಡಿದ್ದರು ಎನ್ನುವುದನ್ನು ಮರೆಯಬಾರದು. ಕನೇರಿಯಾ ಪಿಸಿಬಿ ವಿರುದ್ಧ ನೀಡುತ್ತಿರುವ ಹೇಳಿಕೆಯನ್ನು ಖಂಡಿಸುತ್ತೇವೆ. ಕನೇರಿಯಾ ಹೇಳಿಕೆಯು ನಮಗೆ ತುಂಬಾ ನೋವುಂಟು ಮಾಡಿದೆ. ನಾವು ಅವರಿಗೆ ನಿಷೇಧ ಹೇರಿಲ್ಲ. ಇಂಗ್ಲೆಂಡ್‌ನಲ್ಲಿ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿಯು ಅವರಿಗೆ ನಿಷೇಧ ಹೇರಿದೆ. ನಿಷೇಧ ವಿರುದ್ಧ ಮೇಲ್ಮನವಿ ಸಲ್ಲಿಸಲು ಪಿಸಿಬಿ ಎಲ್ಲ ರೀತಿಯಲ್ಲೂ ನೆರವು ನೀಡಿದೆ. ಕನೇರಿಯಾ ತನ್ನ ಪ್ರಕರಣವನ್ನು ಮುಹಮ್ಮದ್ ಆಮಿರ್‌ಗೆ ಹೋಲಿಸುತ್ತಿರುವುದು ಸರಿಯಲ್ಲ’’ ಎಂದು ಪಿಸಿಬಿ ಅಧಿಕಾರಿ ಅಮ್ಜಾದ್ ಹುಸೈನ್ ತಿಳಿಸಿದ್ದಾರೆ.
ಪಿಸಿಬಿ ತನ್ನ ವಿಷಯದಲ್ಲಿ ಯಾವುದೇ ಆಸಕ್ತಿ ತೋರಿಲ್ಲ. ಈ ಹಿನ್ನೆಲೆಯಲ್ಲಿ ನಾನು ‘ತಾರತಮ್ಯ’ ಶಬ್ದ ಬಳಸುತ್ತಿರುವೆ. ನಾನು ಹಿಂದೂ ಎಂಬ ಕಾರಣಕ್ಕೆ ನಿರ್ಲಕ್ಷ ತೋರಲಾಗುತ್ತಿದೆ ಎಂದು ಭಾರತದ ಟಿವಿ ಚಾನಲ್‌ವೊಂದಕ್ಕೆ ಕನೇರಿಯಾ ಹೇಳಿಕೆ ನೀಡಿದ್ದರು. ಕನೇರಿಯಾ ತನ್ನ ಕುಟುಂಬ ಸದಸ್ಯರೊಂದಿಗೆ ಭಾರತ ಪ್ರವಾಸದಲ್ಲಿದ್ದು, ತವರಿಗೆ ವಾಪಸಾಗುವ ಪ್ರಶ್ನೆಗೆ ಉತ್ತರಿಸುತ್ತಿಲ್ಲ. ಅವರು ಬಿಸಿಸಿಐಯಿಂದ ನೆರವಿನ ನಿರೀಕ್ಷೆಯಲ್ಲಿದ್ದಾರೆ ಎನ್ನಲಾಗಿದೆ.





