ಸ್ಟೇಡಿಯಂನಲ್ಲಿ ಮತ್ತೆ ರಾದ್ದಾಂತ ಮಾಡಿದರೆ ಟೂರ್ನಿಯಿಂದ ಹೊರಕ್ಕೆ:

ರಶ್ಯ ಫುಟ್ಬಾಲ್ ತಂಡಕ್ಕೆ ಯುಇಎಫ್‌ಎ ಎಚ್ಚರಿಕೆ
ಪ್ಯಾರಿಸ್, ಜೂ.14: ಇಂಗ್ಲೆಂಡ್ ವಿರುದ್ಧ ಇತ್ತೀಚೆಗೆ ನಡೆದ ಯುರೋ ಕಪ್ ಪಂದ್ಯದ ವೇಳೆ ರಶ್ಯದ ಅಭಿಮಾನಿಗಳು ಹಿಂಸಾಚಾರ ನಡೆಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಯುರೋಪ್ ಫುಟ್ಬಾಲ್ ಆಡಳಿತ ಮಂಡಳಿ ಯುಇಎಫ್‌ಎ ರಶ್ಯದ ಅಭಿಮಾನಿಗಳು ಮತ್ತೊಮ್ಮೆ ಸ್ಟೇಡಿಯಂನೊಳಗೆ ಹಿಂಸಾಚಾರದಲ್ಲಿ ತೊಡಗಿದರೆ, ರಶ್ಯ ಫುಟ್ಬಾಲ್ ತಂಡವನ್ನು ಟೂರ್ನಿಯಿಂದ ಹೊರ ಹಾಕಲಾಗುತ್ತದೆ ಎಂದು ಎಚ್ಚರಿಕೆ ರವಾನಿಸಿದೆ.
ಇತ್ತೀಚೆಗೆ ಸ್ಟೇಡಿಯಂನ ಒಳಗೆ ನಡೆದ ಎಲ್ಲ ರಾದ್ದಾಂತಕ್ಕೆ ರಶ್ಯವೇ ಹೊಣೆ. ರಶ್ಯವನ್ನು ಟೂರ್ನಿಯ ಅಂತ್ಯದ ತನಕ ಅನರ್ಹಗೊಳಿಸಿದ್ದು, ತೀರ್ಪನ್ನ್ನು ಅಮಾನತಿನಲ್ಲಿರಿಸಲಾಗಿದೆ. ಟೂರ್ನಿಯಲ್ಲಿ ರಶ್ಯ ಆಡಲಿರುವ ಉಳಿದ ಪಂದ್ಯಗಳಲ್ಲಿ ರಶ್ಯದ ಅಭಿಮಾನಿಗಳು ಮತ್ತೊಮ್ಮೆ ರಾದ್ದಾಂತ ನಡೆಸಿದರೆ, ರಶ್ಯವನ್ನು ಟೂರ್ನಿಯಿಂದ ಹೊರಗಿಡಲಾಗುವುದು ಎಂದು ಯುಇಎಫ್‌ಎ ತಿಳಿಸಿದೆ.
ರಶ್ಯದ ಫುಟ್ಬಾಲ್ ಯೂನಿಯನ್ ವಿರುದ್ಧ ಪ್ರೇಕ್ಷಕರು ಪಂದ್ಯಕ್ಕೆ ಅಡ್ಡಿಪಡಿಸಿದ, ಶಬ್ದ ಮಾಲಿನ್ಯ ಮಾಡಿದ ಹಾಗೂ ಜನಾಂಗೀಯ ನಿಂದನೆ ಮಾಡಿದ ಪ್ರಕರಣ ದಾಖಲಿಸಲಾಗಿದೆ. ಎಥಿಕ್ಸ್ ಸಮಿತಿಯು 150,000 ಯುರೋಸ್ ದಂಡ ವಿಧಿಸಲು ನಿರ್ಧರಿಸಿದೆ ಎಂದು ಯುಇಎಫ್‌ಎ ಪ್ರಕಟನೆಯಲ್ಲಿ ತಿಳಿಸಿದೆ.
ಶನಿವಾರ ರಾತ್ರಿ ನಡೆದ ಯುರೋ ಕಪ್ ಪಂದ್ಯದಲ್ಲಿ ರಶ್ಯ-ಇಂಗ್ಲೆಂಡ್ ನಡುವಿನ ಪಂದ್ಯ ಡ್ರಾಗೊಂಡ ಬಳಿಕ ರಶ್ಯದ ಕಿಡಿಗೇಡಿ ಅಭಿಮಾನಿಗಳು ಭದ್ರತಾ ಬೇಲಿಯನ್ನು ದಾಟಿ ಇಂಗ್ಲೆಂಡ್‌ನ ಫುಟ್ಬಾಲ್ ಅಭಿಮಾನಿಗಳೊಂದಿಗೆ ಘರ್ಷಣೆ ನಡೆಸಿದ್ದರು. ಈ ಹಿಂಸಾಚಾರವೂ ಮಾರ್ಸೆಲ್ಲಿ ಪಟ್ಟಣದ ಹಳೆ ಕೋಟೆ ಪ್ರದೇಶದಲ್ಲಿ ಮೂರು ದಿನಗಳ ಕಾಲ ಮುಂದುವರಿದಿದ್ದು, ಘಟನೆಯಲ್ಲಿ 12 ಜನರು ಗಾಯಗೊಂಡಿದ್ದರು. ಗಾಯಗೊಂಡವರು ಇಂಗ್ಲೆಂಡ್ ಪ್ರಜೆಗಳಾಗಿದ್ದರು.
ಮತ್ತೊಮ್ಮೆ ಈ ರೀತಿ ವರ್ತಿಸಿದರೆ ಟೂರ್ನಿಯಿಂದ ಅನರ್ಹಗೊಳಿಸಲಾಗುವುದು ಎಂದು ರಶ್ಯ ಹಾಗೂ ಇಂಗ್ಲೆಂಡ್‌ಗೆ ಯುಇಎಫ್‌ಎ ಈಗಾಗಲೇ ಎಚ್ಚರಿಕೆ ನೀಡಿದೆ. ಅಭಿಮಾನಿಗಳ ಕೆಟ್ಟ ವರ್ತನೆ ಹಿನ್ನೆಲೆಯಲ್ಲಿ ರಶ್ಯಕ್ಕೆ ದಂಡ ವಿಧಿಸಲಾಗಿದೆ.







