ವಂಚನೆ: ಬ್ಯಾಂಕ್ ಮ್ಯಾನೇಜರ್ ಬಂಧನ
ಕಾಸರಗೋಡು, ಜೂ.14: ಮುಟ್ಟತ್ತೋಡಿ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ನಕಲಿ ಚಿನ್ನಾಭರಣಗಳನ್ನು ಅಡವಿಟ್ಟು ನಾಲ್ಕು ಕೋಟಿ ರೂ. ವಂಚನೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬ್ಯಾಂಕ್ ಮ್ಯಾನೇಜರ್‌ನನ್ನು ತನಿಖಾ ತಂಡ ಬಂಧಿಸಿದೆ.
ಬಂಧಿತನನ್ನು ಬ್ಯಾಂಕ್ ನ ವಿದ್ಯಾನಗರ ಶಾಖೆಯ ಮ್ಯಾನೇಜರ್ ಸಂತೋಷ್ ಕುಮಾರ್ (44)ಎಂದು ಗುರುತಿಸಲಾಗಿದೆ. ಇದರಿಂದ ಬಂಧಿತರಾದವರ ಸಂಖ್ಯೆ ಆರಕ್ಕೇರಿದೆ. ಘಟನೆ ಬೆಳಕಿಗೆ ಬಂದ ಬಳಿಕ ಸಂತೋಷ್ ಕುಮಾರ್ ತಲೆಮರೆಸಿಕೊಂಡಿದ್ದನು.
ಸಂತೋಷ್ ಕುಮಾರ್, ಬ್ಯಾಂಕ್
ನ ಅಪ್ರೈಸರ್ ಟಿ.ವಿ. ಸತೀಶನ್, ಕುಂಟಾರು ಉಯಿತ್ತಡ್ಕದ ಯು.ಕೆ. ಹಾರಿಸ್ ವಂಚನೆಯ ಸೂತ್ರಧಾರರು ಎಂದು ತನಿಖಾ ತಂಡಕ್ಕೆ ಮಾಹಿತಿ ಲಭಿಸಿದೆ. ಸಂತೋಷ್ ಕುಮಾರ್ ಪತ್ನಿ ರೇಖಾ ಹೆಸರಲ್ಲಿ ಬ್ಯಾಂಕ್ ನಲ್ಲಿ ಖಾತೆ ತೆರೆದು ಅದರಲ್ಲಿ 56 ಲಕ್ಷ ರೂ. ಠೇವಣಿ ಇರಿಸಿರುವುದು ಪೊಲೀಸ್ ತನಿಖೆಯಲ್ಲಿ ಸ್ಪಷ್ಟಗೊಂಡಿದೆ. ಆ ಹಿನ್ನೆಲೆಯಲ್ಲಿ ಆಕೆ ವಿರುದ್ಧವೂ ಪ್ರಕರಣ ದಾಖಲಿಸಲು ಪೊಲೀಸರು ಚಿಂತನೆ ನಡೆಸಿದ್ದಾರೆ.
ಅಂಬಲತ್ತರ ಕೋಟಪ್ಪಾರದಲ್ಲಿರುವ ಸಂತೋಷ್ ಕುಮಾರ್ ಮನೆಗೆ ದಾಳಿ ನಡೆಸಿದ ತನಿಖಾ ತಂಡ ಮೂರೂವರೆ ಲಕ್ಷ ರೂ., ಹಲವು ನಕಲಿ ಚಿನ್ನಾಭರಣ, ಬ್ಯಾಂಕ್ ಸಾಲ ಕುರಿತಾದ ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದೆ.
ಈ ವಂಚನೆ ಪ್ರಕರಣದ ತನಿಖೆ ಆರಂಭಗೊಂಡ ವೇಳೆ ಮುಟ್ಟತ್ತೋಡಿ ಬ್ಯಾಂಕ್ ನ ವಿದ್ಯಾನಗರ ಶಾಖೆಯಲ್ಲಿ ಈ ಹಿಂದೆ ಅಡವಿರಿಸಲಾಗಿದ್ದ ಹಲವು ಚಿನ್ನಾಭರಣ ನಾಪತ್ತೆಯಾಗಿತ್ತು. ಆ ಹಿನ್ನೆಲೆಯಲ್ಲಿ ಆರೋಪಿ ಸಂತೋಷ್ ಕುಮಾರ್ಮನೆಯಲ್ಲಿ ನಡೆದ ದಾಳಿಯಲ್ಲಿ ಪತ್ತೆಯಾದ ನಕಲಿ ಚಿನ್ನದ ಒಡವೆಗಳು, ಬ್ಯಾಂಕ್ ಲಾಕರ್‌ನಿಂದ ನಾಪತ್ತೆಯಾಗಿದ್ದ ಒಡವೆಗಳಾಗಿವೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.
ಈ ನಡುವೆ ಎರಡು ದಿನಗಳ ಹಿಂದೆ ಬಂಧಿತನಾದ ಪ್ರಮುಖ ಆರೋಪಿ ಯು. ಕೆ. ಹಾರಿಸ್ ಇದೇ ರೀತಿ ಇನ್ನೊಂ ದು ವಂಚನೆ ನಡೆಸಿರುವುದು ಬೆಳಕಿಗೆ ಬಂದಿದೆ.
ಬೋವಿಕ್ಕಾನದಲ್ಲಿರುವ ಮುಳ್ಳೇರಿಯಾ ಸೇವಾ ಸಹಕಾರಿ ಬ್ಯಾಂಕ್‌ನಲ್ಲೂ ನಕಲಿ ಚಿನ್ನಾಭರಣ ಅಡವಿಟ್ಟು ವಂಚನೆ ನಡೆಸಿದ್ದಾನೆ. 2014ರ ಜನವರಿ 22 ರಂದು 71,800 ಗ್ರಾಂ ನಕಲಿ ಚಿನ್ನಾಭರಣ ಅಡವಿಟ್ಟು 1,21 ಲಕ್ಷ ರೂ . ಪಡೆದಿದ್ದನು. ಈ ಕುರಿತು ಆದೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹಾರಿಸ್‌ನ ಭಾವಚಿತ್ರ ಮಾಧ್ಯಮಗಳಲ್ಲಿ ಪ್ರಕಟವಾದ ಹಿನ್ನಲೆಯಲ್ಲಿ ಈತ ಬ್ಯಾಂಕ್‌ನಲ್ಲಿಟ್ಟ ಚಿನ್ನಾಭರಣವನ್ನು ತಪಾ ಸಣೆ ನಡೆಸಿದಾಗ ನಕಲಿ ಎಂದು ಬೆಳಕಿಗೆ ಬಂತು.
ಈ ಬಗ್ಗೆ ಬ್ಯಾಂಕ್ ಕಾರ್ಯದರ್ಶಿ ಆದೂರು ಪೊಲೀಸರಿಗೆ ದೂರು ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ವಂಚನೆ ನಡೆಸಿದ ಗ್ರಾಹಕರನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.





