ತನ್ನ ಉತ್ತರ ಪತ್ರಿಕೆಯನ್ನು ತಾನೇ ಮೌಲ್ಯಮಾಪನ ಮಾಡಿ 100ಕ್ಕೆ 100 ಅಂಕ ಪಡೆದ!
‘ಶಿಕ್ಷಕಿಗೆ ತೊಂದರೆ ನೀಡದ ಒಳ್ಳೆಯ ಹುಡುಗ’

ಅಹ್ಮದಾಬಾದ್, ಜೂ.15: 12ನೇ ತರಗತಿಯ ವಿದ್ಯಾರ್ಥಿಯೊಬ್ಬ ಗುಜರಾತ್ ಸೆಕೆಂಡರಿ ಪರೀಕ್ಷಾ ಮಂಡಳಿ ಪರೀಕ್ಷೆಯಲ್ಲಿ ತನ್ನ ಅರ್ಥಶಾಸ್ತ್ರ ಉತ್ತರ ಪತ್ರಿಕೆಯನ್ನು ಬರೆದು, ತಾನೇ ಕೆಂಪು ಶಾಯಿಯಿಂದ ಮೌಲ್ಯಮಾಪನ ಮಾಡಿಕೊಂಡು, ಪರೀಕ್ಷಕರಿಗೆ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ.
ಇದೀಗ ವಿದ್ಯಾರ್ಥಿ ವಿರುದ್ಧ ನಕಲು ಪ್ರಕರಣ ದಾಖಲಿಸಲಾಗಿದೆ. ಭೂಗೋಳಶಾಸ್ತ್ರ ಹಾಗೂ ಅರ್ಥಶಾಸ್ತ್ರ ಎರಡೂ ವಿಷಯಗಳಲ್ಲಿ ವಿದ್ಯಾರ್ಥಿ ಸ್ವಯಂ ಮೌಲ್ಯಮಾಪನ ಮಾಡಿಕೊಂಡಿರುವುದು ಪತ್ತೆಯಾಗಿದೆ. ಜಾಗೃತದಳದ ಶಿಕ್ಷಕರು ಮೌಲ್ಯಮಾಪನ ನಡೆಸಿದ ವೇಳೆ ಭೂಗೋಳ ಶಾಸ್ತ್ರದ ಅವ್ಯವಹಾರ ಪತ್ತೆಯಾಯಿತು. ಈ ವಿಷಯದಲ್ಲಿ ವಿದ್ಯಾರ್ಥಿ ಹರ್ಷದ್ ಸರ್ವಯ್ಯ 34 ಅಂಕ ಪಡೆದರೆ, ಅರ್ಥಶಾಸ್ತ್ರದಲ್ಲಿ 100ಕ್ಕೆ 100 ಅಂಕ ಪಡೆದಿದ್ದ. ಆದರೆ ವೌಲ್ಯಮಾಪನ ಮಾಡುವ ಶಿಕ್ಷಕರಿಗೆ ಇದು ಗಮನಕ್ಕೆ ಬಂದಿಲ್ಲ ಎಂದು ಮಂಡಳಿ ಕಾರ್ಯದರ್ಶಿ ಜಿ.ಡಿ.ಪಟೇಲ್ ಹೇಳಿದ್ದಾರೆ.
ವಿದ್ಯಾರ್ಥಿಯನ್ನು ಪರೀಕ್ಷಾ ಸುಧಾರಣಾ ಸಮಿತಿಯ ಮುಂದೆ ಕರೆದು, ಆತ ತಪ್ಪಿತಸ್ಥ ಎಂದು ಖಚಿತವಾದರೆ ಎರಡು ಪರೀಕ್ಷೆಗಳಿಂದ ಡಿಬಾರ್ ಮಾಡಲಾಗುವುದು ಎಂದು ಅವರು ಹೇಳಿದರು. ಸಂಶಯ ಬಾರದಂತೆ ಮಾಡುವ ಸಲುವಾಗಿ ವಿದ್ಯಾರ್ಥಿ, ಅಂಕವನ್ನು ಮುಖಪುಟದಲ್ಲಿ ಒಟ್ಟು ನಮೂದಿಸಿಲ್ಲ. ಪ್ರತಿ ಪ್ರಶ್ನೆಯನ್ನು ಏಳು ಶಿಕ್ಷಕರ ಗುಂಪು ಮೌಲ್ಯಮಾಪನ ಮಾಡಿ, ಸಹಿ ಮಾಡಬೇಕು. ಆದ್ದರಿಂದ ಈ ಪ್ರಕರಣ ಬೆಳಕಿಗೆ ಬಂದಿದೆ.
ಶಿಕ್ಷಕರು ಅಂಕವನ್ನು ಕ್ರೋಢೀಕರಿಸಿ 100ಕ್ಕೆ 100 ಎಂದು ಅಂತಿಮಪಡಿಸಿದ್ದರು. ಸಂಬಂಧಪಟ್ಟ ಶಿಕ್ಷಕರಿಗೂ ನೋಟಿಸ್ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಅರ್ಥಶಾಸ್ತ್ರದಲ್ಲಿ 100ಕ್ಕೆ 100 ಅಂಕ ಪಡೆದಿದ್ದ ಈ ವಿದ್ಯಾರ್ಥಿ ಗುಜರಾತಿಯಲ್ಲಿ 12, ಇಂಗ್ಲಿಷ್‌ನಲ್ಲಿ 12, ಸಂಸ್ಕೃತದಲ್ಲಿ 4, ಸಮಾಜಶಾಸ್ತ್ರದಲ್ಲಿ 20, ಮನಃಶಾಸ್ತ್ರದಲ್ಲಿ 5 ಮತ್ತು ಭೂಗೋಳಶಾಸ್ತ್ರದಲ್ಲಿ 35 ಅಂಕಗಳನ್ನು ಪಡೆದಿದ್ದ.







