ವೆಸ್ಟ್‌ಬ್ಯಾಂಕ್‌ಗೆ ನೀರಿನ ಸಂಪರ್ಕ ಕಡಿತಗೊಳಿಸಿದ ಇಸ್ರೇಲ್
ಫೆಲೆಸ್ತೀನಿಯರಿಗೆ ಕುಡಿಯುವ ನೀರಿಲ್ಲದ ರಮಝಾನ್

ಫೆಲೆಸ್ತೀನ್, ಜೂ.15: ಇಸ್ರೇಲಿನ ನ್ಯಾಶನಲ್ ವಾಟರ್ ಕಂಪೆನಿ ಆಕ್ರಮಿತ ವೆಸ್ಟ್ ಬ್ಯಾಂಕಿನ ಹಲವು ಪ್ರದೇಶಗಳಿಗೆ ನೀರು ಸಂಪರ್ಕ ಕಡಿತಗೊಳಿಸಿದ್ದು ಪವಿತ್ರ ರಮಝಾನ್ ತಿಂಗಳಲ್ಲಿ ಸಾವಿರಾರು ಫೆಲೆಸ್ತೀನಿಯರು ಕುಡಿಯುವ ನೀರಿಲ್ಲದೆ ಪರದಾಡುವ ಪರಿಸ್ಥಿತಿ ಬಂದೊದಗಿದೆ.
ಫೆಲೆಸ್ತೀನಿ ನಗರಗಳಿಗೆ ನೀರು ಸರಬರಾಜು ಮಾಡುವ ಪ್ರಮುಖ ಕಂಪೆನಿಯಾಗಿರುವ ಮೆಕೊರೋಟ್, ಜೆನಿನ್ ಮುನಿಸಿಪಾಲಿಟಿ ಹಾಗೂ ಹಲವಾರು ನಬ್ಲು ಗ್ರಾಮಗಳು, ಸಲ್ಫಿಟ್ ನಗರ ಮತ್ತಿತರ ಗ್ರಾಮಗಳಿಗೆ ನೀರು ಸರಬರಾಜು ಕಡಿತಗೊಳಿಸಿದೆ.
ಕೆಲವು ಪ್ರದೇಶಗಳಲ್ಲಿ ನೀರು ಸರಬರಾಜು ಸ್ಥಗಿತಗೊಂಡು 40ಕ್ಕೂ ಹೆಚ್ಚು ದಿನಗಳಾಗಿವೆ ಎಂದು ಫೆಲೆಸ್ತೀನಿ ಹೈಡ್ರಾಲಜಿ ಗ್ರೂಪಿನ ಕಾರ್ಯನಿರ್ವಾಹಕ ನಿರ್ದೇಶಕ ಅಯ್ಮಾನ್ ರಬಿ ತಿಳಿಸಿದ್ದಾರೆ. ‘‘ಜನರೀಗ ನೀರಿನ ಟ್ರಕ್‌ಗಳಿಂದ ನೀರು ಖರೀದಿಸುತ್ತಿದ್ದಾರೆ. ಇಲ್ಲವೇ ಇತರ ನೀರಿನ ತೊರೆಗಳನ್ನು ಅವಲಂಬಿಸಿದ್ದಾರೆ’’ ಎಂದವರು ಮಾಹಿತಿ ನೀಡಿದರು.
‘‘ಕುಟುಂಬಗಳ ಸದಸ್ಯರು ದಿನವೊಂದಕ್ಕೆ 2,3 ಅಥವಾ 10 ಲೀಟರ್ ನೀರು ಪಡೆಯುತ್ತಿದ್ದು ಕೆಲವು ಕಡೆ ನೀರಿನ ರೇಷನಿಂಗ್ ಆರಂಭವಾಗಿದೆ,’’ಎಂದು ಅವರು ಹೇಳಿದರು.
ಜೆನಿನ್ ನಗರದಲ್ಲಿ 40,000ಕ್ಕೂ ಹೆಚ್ಚಿನ ಜನಸಂಖ್ಯೆಯಿದ್ದು ನೀರಿನ ಸಮಸ್ಯೆಯಿಂದ ಏನಾದರೂ ದುರಂತ ಸಂಭವಿಸಿದರೆ ಕಂಪೆನಿಯನ್ನೇ ಹೊಣೆಗಾರನನ್ನಾಗಿಸಲಾಗುವುದು, ಎಂದು ಜನ ಎಚ್ಚರಿಸಿದ್ದಾರೆ.
ವಿಶ್ವ ಸಂಸ್ಥೆಯ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಗೆ ದಿನಕ್ಕೆ ಕನಿಷ್ಠ 7.5 ಲೀಟರ್ ನೀರಿನ ಅಗತ್ಯವಿದ್ದರೂ ಫೆಲೆಸ್ತೀನಿನ ಹಲವು ಕಡೆ ಉಷ್ಣಾಂಶ 35 ಡಿಗ್ರಿಗೂ ಅಧಿಕವಿರುವಾಗ ಇದು ಸಾಕಾಗದು.
1967ರಲ್ಲಿ ಇಸ್ರೇಲಿ ಪಡೆಗಳು ವೆಸ್ಟ್ ಬ್ಯಾಂಕ್ ಹಾಗೂ ಗಝಾ ಸ್ಟ್ರಿಪ್ ಆಕ್ರಮಿಸಿಕೊಂಡ ನಂತರ ಅಲ್ಲಿನ ಫೆಲೆಸ್ತೀನಿಯರಿಗೆ ನೀರು ಸರಬರಾಜನ್ನು ನಿಯಂತ್ರಿಸುತ್ತಿದೆ. ಇಸ್ರೇಲೀಯರಿಗೆ ದಿನಕ್ಕೆ ಪ್ರತಿಯೊಬ್ಬ ವ್ಯಕ್ತಿಗೆ 350 ಲೀಟರ್ ನೀರು ದೊರೆಯುತ್ತಿದೆ.







