ವಿಟ್ಲ: ನ್ಯಾಯಾಧೀಶರಾಗಿ ನೇಮಕಗೊಂಡ ಸಲೀಂರಿಗೆ ಅಭಿನಂದನೆ

ವಿಟ್ಲ, ಜೂ.15: ಕರ್ನಾಟಕ ಉಚ್ಛನ್ಯಾಯಾಲಯದ ಸಿವಿಲ್ ನ್ಯಾಯಾಧೀಶರಾಗಿ ನೇಮಕಗೊಂಡ ಪಾಣೆಮಂಗಳೂರು ಸಮೀಪದ ಅಕ್ಕರಂಗಡಿ-ನೆಹರುನಗರ ನಿವಾಸಿ ಅಬ್ದುಲ್ ಸಲೀಂರನ್ನು ನೆಹರುನಗರ ಬದ್ರಿಯಾ ಜುಮಾ ಮಸೀದಿ ಆಡಳಿತ ಸಮಿತಿ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭ ಮಾತನಾಡಿದ ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್, ವಿದ್ಯೆ ಎಂಬುದು ಮಾನವ ಜೀವನದ ಇಹ-ಪರ ಯಶಸ್ಸಿನ ಪ್ರಮುಖ ಅಸ್ತ್ರವಾಗಿದೆ. ಆದರೆ ಈ ವಿದ್ಯೆ ಅಹಂನಿಂದ ಕೂಡಿರದೆ ಸರಳತೆಯನ್ನು ಹೆಚ್ಚಿಸುವಂತಿರಬೇಕು. ತಾನು ಪಡೆದ ವಿದ್ಯೆ ಸಮಾಜಕ್ಕೂ, ಸಮುದಾಯಕ್ಕೂ ಸಹಕಾರಿಯಾಗುವ ನಿಟ್ಟಿನಲ್ಲಿ ವ್ಯಕ್ತಿ ಕಾರ್ಯಪ್ರವೃತ್ತವಾಗಬೇಕು. ನೆಹರುನಗರ ಜಮಾಅತ್ ವ್ಯಾಪ್ತಿಯ ಯುವಕನೋರ್ವ ನ್ಯಾಯಾಧೀಶ ಹುದ್ದೆಯನ್ನು ಅಲಂಕರಿಸಿರುವುದು ಅತ್ಯಂತ ಸಂತೋಷದ ವಿಚಾರ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ನೆಹರುನಗರ ಬದ್ರಿಯ ಜುಮಾ ಮಸೀದಿ ಅಧ್ಯಕ್ಷ ಹಾಜಿ ಪಿ.ಎಸ್. ಅಬ್ದುಲ್ ಹಮೀದ್ ಮಾತನಾಡಿ ವ್ಯಕ್ತಿಯೋರ್ವ ಜೀವನದಲ್ಲಿ ಯಶಸ್ಸಿನ ಉನ್ನತ ಹಂತಕ್ಕೇರಿದಾಗ ನಡೆದು ಬಂದ ದಾರಿಯನ್ನು ಮರೆಯದೆ ಸಮಾಜಕ್ಕೂ ಸಮುದಾಯಕ್ಕೂ ಉಪಕಾರಿಯಾಗಬೇಕು ಎಂದರು.
ಈ ಸಂದರ್ಭ ಶಿಕ್ಷಕ ಬಿ.ಎಂ. ತುಂಬೆ, ನ್ಯಾಯವಾದಿ ಹಾತಿಮ್ ಅಹ್ಮದ್, ನರಿಕೊಂಬು ಗ್ರಾ.ಪಂ. ಸದಸ್ಯ ಸುಲೈಮಾನ್, ಪ್ರಮುಖರಾದ ಪಿ.ಎಂ. ಯೂಸುಪ್ ಹಾಜಿ, ಇಬ್ರಾಹಿಂ ಮಿಲ್ಕ್, ಖಾದರ್ ಮಾಸ್ಟರ್, ಪಿ.ಕೆ. ಹುಸೈನ್, ಹಸನಬ್ಬ, ಅಬೂಬಕ್ಕರ್, ಸಿ.ಪಿ. ಇಬ್ರಾಹೀಂ, ಪಕ್ರುದ್ದೀನ್ ದಾರಿಮಿ, ಇಮ್ರಾನ್ ಕೆ.ಎಸ್., ಸೆಲೀಂ ನೆಹರುನಗರ ಮೊದಲಾದವರು ಉಪಸ್ಥಿತರಿದ್ದರು. ಶುಕೂರ್ ದಾರಿಮಿ ಸ್ವಾಗತಿಸಿ, ಹಮೀದ್ ಗೋಳ್ತಮಜಲು ಕಾರ್ಯಕ್ರಮ ನಿರೂಪಿಸಿದರು.







