ರೊಹಿಂಗ್ಯ ಮುಸ್ಲಿಮರಿಗೆ ರಮಝಾನ್ ಉಡುಗೊರೆ
ಭೇಟಿ ನೀಡಿ ಸಂತೈಸಿದ ಟರ್ಕಿಯ ವಿದೇಶ ಸಚಿವ

ನೇಪಿಡೋ, ಜೂ. 15: ಮ್ಯಾನ್ಮಾರ್ ಪ್ರವಾಸದಲ್ಲಿರುವ ಟರ್ಕಿಯ ವಿದೇಶ ಸಚಿವ ವೌಲುತ್ ಕಾವುಸೊಗ್ಲು ಸೋಮವಾರ ರಖೈನ್ ರಾಜ್ಯಕ್ಕೆ ಭೇಟಿ ನೀಡಿದರು. ಅಲ್ಲಿ ಸಂಜೆ ಅವರು ಸ್ಥಳೀಯ ಮುಸ್ಲಿಮರನ್ನು ಭೇಟಿಯಾಗಿ ಇಫ್ತಾರ್ ಕೂಟ ಏರ್ಪಡಿಸಿದರು.
ರಖೈನ್‌ಗೆ ತೆರಳುವ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಕಾವುಸೊಗ್ಲು, ಮುಸ್ಲಿಮರಿಗೆ ಮಾತ್ರವಲ್ಲ, ಈ ಬಡ ಪ್ರದೇಶದಲ್ಲಿರುವ ಎಲ್ಲರಿಗೆ ಸಹಾಯ ಮಾಡಲು ಟರ್ಕಿ ನಿರ್ಧರಿಸಿದೆ ಎಂದು ಹೇಳಿದರು.
ತನ್ನ ಮ್ಯಾನ್ಮಾರ್ ಪ್ರವಾಸದ ವೇಳೆ ಕಾವುಸೊಗ್ಲು ದೇಶದ ಆಡಳಿತ ಪಕ್ಷದ ನಾಯಕಿ ಆಂಗ್ ಸಾನ್ ಸೂ ಕಿ, ಅಧ್ಯಕ್ಷ ಹಟಿನ್ ಕ್ಯಾವ್ ಮತ್ತು ಸಶಸ್ತ್ರ ಪಡೆಗಳ ಪ್ರಧಾನ ದಂಡನಾಯಕ ಮಿನ್ ಆಂಗ್ ಹಲಯಂಗ್‌ರನ್ನು ಭೇಟಿಯಾದರು.
ಈ ವರ್ಷದ ಮಾರ್ಚ್ ತಿಂಗಳಲ್ಲಿ ಅಧಿಕಾರಕ್ಕೆ ಬಂದಿರುವ ಮ್ಯಾನ್ಮಾರ್‌ನ ನೂತನ ಪ್ರಜಾಸತ್ತಾತ್ಮಕ ಸರಕಾರವನ್ನು ಶ್ಲಾಘಿಸಿದ ಅವರು, ದೇಶಕ್ಕೆ ನೀಡಲಾಗುತ್ತಿರುವ ‘‘ನೈತಿಕ ಮತ್ತು ಆರ್ಥಿಕ’’ ಬೆಂಬಲವನ್ನು ಮುಂದುವರಿಸುವುದಾಗಿ ಘೋಷಿಸಿದರು.
50 ವರ್ಷಗಳಿಗೂ ಅಧಿಕ ಅವಧಿಯಲ್ಲಿ ಅಸ್ತಿತ್ವದಲ್ಲಿದ್ದ ಸೇನಾ ಸರಕಾರದ ಜಾಗದಲ್ಲಿ ಪ್ರಜಾಪ್ರಭುತ್ವ ಸರಕಾರ ಅಸ್ತಿತ್ವಕ್ಕೆ ಬಂದಿದೆ.
ಇಫ್ತಾರ್‌ಗೂ ಮುನ್ನ ಸುಮಾರು 4,000 ರೊಹಿಂಗ್ಯರನ್ನು ಉದ್ದೇಶಿಸಿ ಮಾತನಾಡಿದ ಕಾವುಸೊಗ್ಲು, ಅವರೊಂದಿಗೆ ತಾನಿದ್ದೇನೆ ಎಂಬ ಭರವಸೆ ನೀಡಿದರು. ಸಿಟ್ವೆಯಲ್ಲಿ ಟರ್ಕಿ ಸರಕಾರವು ಟರ್ಕಿ ಸಹಕಾರ ಮತ್ತು ಸಮನ್ವಯ ಸಂಸ್ಥೆ (ಟಿಐಕೆಎ)ಯ ಮೂಲಕ ಶಾಲೆಗಳು, ಆಸ್ಪತ್ರೆಗಳು ಮತ್ತು ಮೂಲಸೌಕರ್ಯಗಳನ್ನು ನಿರ್ಮಿಸುವುದು ಎಂದು ಹೇಳಿದರು.
ಇದೇ ಸಂಧರ್ಭದಲ್ಲಿ ಟಿಐಕೆಎ ನವೀಕರಿಸಿದ ಅನಾಥಾಲಯ ಮತ್ತು ಶಾಲೆಗೆ ಟರ್ಕಿ ವಿದೆಶ ಸಚಿವರು ಭೇಟಿ ನೀಡಿದರು. ಮ್ಯಾನ್ಮಾರ್ ಸರಕಾರ ಮತ್ತು ದೇಶದ ಮುಸ್ಲಿಮ್ ಸಮುದಾಯದ ನಡುವಿನ ಶಾಂತಿ ಪ್ರಕ್ರಿಯೆಗೆ ಬೆಂಬಲ ನೀಡುವುದನ್ನು ಟರ್ಕಿ ಮುಂದುವರಿಸುವುದು ಎಂದು ಈ ಸಂದರ್ಭದಲ್ಲಿ ಅವರು ಘೋಷಿಸಿದರು.
ಇತ್ತೀಚಿನ ದಿನಗಳಲ್ಲಿ ಮ್ಯಾನ್ಮಾರ್‌ನ ರೊಹಿಂಗ್ಯ ಮುಸ್ಲಿಮರ ಮೇಲೆ ನಡೆಯುತ್ತಿರುವ ಹಿಂಸಾಚಾರ ಪ್ರಮಾಣದಲ್ಲಿ ಹೆಚ್ಚಳವಾಗಿರುವುದನ್ನು ಸ್ಮರಿಸಬಹುದಾಗಿದೆ. ಮ್ಯಾನ್ಮಾರ್‌ನ ಶಿಬಿರಗಳಲ್ಲಿ ವಾಸಿಸುತ್ತಿರುವ ರೊಹಿಂಗ್ಯ ಮುಸ್ಲಿಮರು, ಇತರ ಜನಾಂಗೀಯ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರು ಅಂತಾರಾಷ್ಟ್ರೀಯ ನೆರವನ್ನು ಅವಲಂಬಿಸುತ್ತಿದ್ದಾರೆ.
‘‘ಮಾನವೀಯ ನೆರವಿನ ಮುಖಾಂತರ ಇಲ್ಲಿನ ಜನರಿಗೆ ನೆರವು ನೀಡಲು ಟರ್ಕಿ ಸಿದ್ಧವಾಗಿದೆ. ಸ್ಥಳೀಯ ಆಡಳಿತ ಮತ್ತು ಸರಕಾರಗಳಿಗೂ ಸಹಕಾರ ನೀಡಲು ನಾವು ಸಿದ್ಧರಿದ್ದೇವೆ. ಪೌರತ್ವ ಮುಂತಾದ ವಿಷಯಗಳ ಬಗ್ಗೆ ಈಗಾಗಲೇ ಚರ್ಚೆಯನ್ನು ಕೈಗೆತ್ತಿಕೊಳ್ಳಲಾಗಿದೆ’’ ಎಂದರು.
ಅವರ ಈ ಭೇಟಿಯ ವೇಳೆ ಸ್ಥಳೀಯರಿಗೆ 50 ಕೆಜಿ ಅಕ್ಕಿ ಮತ್ತು ಇತರ ಆಹಾರ ಧಾನ್ಯಗಳನ್ನು ಟಿಐಕೆಎ ಮೂಲಕ ರಂಝಾನ್ ಕೊಡುಗೆ ರೂಪದಲ್ಲಿ ವಿತರಿಸಲಾಯಿತು.





