‘ಹಿಂದೂ ರಾಷ್ಟ್ರ ಸ್ಥಾಪನೆ’ಗಾಗಿ ಗೋವಾದಲ್ಲಿ ಅಖಿಲ ಭಾರತ ಅಧಿವೇಶನ
ಮಂಗಳೂರು, ಜೂ.15: ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹಿಂದುತ್ವವಾದಿ ಸಂಘಟನೆಗಳ ರಾಷ್ಟ್ರವ್ಯಾಪಿ ಸಂಘಟನೆಯನ್ನು ಸ್ಥಾಪಿಸುವ ನಿಟ್ಟಿನಲ್ಲಿ ಜೂ.19ರಿಂದ 25ರವರೆಗೆ ಗೋವಾದಲ್ಲಿ ಪಂಚಮ ಅಖಿಲ ಭಾರತೀಯ ಹಿಂದೂ ಅಧಿವೇಶನವನ್ನು ಹಮ್ಮಿಕೊಳ್ಳಲಾಗಿದ್ದು. ಕರ್ನಾಟಕದಿಂದ ಅಧಿವೇಶನದಲ್ಲಿ ಸುಮಾರು 50 ಮಂದಿ ಭಾಗವಹಿಸಲಿದ್ದಾರೆ ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕ ಗುರುಪ್ರಸಾದ ತಿಳಿಸಿದರು.
ಅಧಿವೇಶನದಲ್ಲಿ ಭಾರತದ 21 ರಾಜ್ಯಗಳು ಹಾಗೂ ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾದಿಂದ 125ಕ್ಕೂ ಅಧಿಕ ಹಿಂದೂ ಸಂಘಟನೆಗಳ 425ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಹಿಂದುತ್ವವಾದಿ ಪಕ್ಷವು ಅಧಿಕಾರದಲ್ಲಿದ್ದರೂ ಹಿಂದೂಗಳ ಅನೇಕ ವರ್ಷಗಳ ಬೇಡಿಕೆಗಳು ಇನ್ನೂ ಪೂರ್ಣಗೊಂಡಿಲ್ಲ. ಕಾಶ್ಮೀರಿ ಹಿಂದೂಗಳ ಪುನರ್ವಸನ, 370ನೆ ಪರಿಚ್ಛೇಧವನ್ನು ರದ್ದುಗೊಳಿಸುವುದು, ಗೋಮಾಂಸ ಹತ್ಯೆ ನಿರ್ಬಂಧ, ರಾಮ ಮಂದಿರ ಪುನರ್‌ನಿರ್ಮಾಣ ವಿಷಯಗಳ ಬಗ್ಗೆ ಸರಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಚರ್ಚೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಕೀಲ ದಿನೇಶ್ ನಾಯ್ಕಿ, ಸನಾತನ ಸಂಸ್ಥೆಯ ಸಂಗೀತಾ ಪ್ರಭು ಉಪಸ್ಥಿತರಿದ್ದರು.







