ಕಾಂಗ್ರೆಸ್ ಪಕ್ಷದಿಂದ ನಿಷ್ಠಾವಂತ ಕಾರ್ಯಕರ್ತರಿಗೆ ಗೌರವ: ಶಾಸಕ ಲೋಬೊ
ನಿರ್ದೇಶಕರಾಗಿ ನೇಮಕಗೊಂಡ ಟಿ.ಕೆ. ಸುಧೀರ್, ಜೆ. ಸದಾಶಿವ ಅಮೀನ್‌ರಿಗೆ ಅಭಿನಂದನೆ

ಮಂಗಳೂರು, ಜೂ.15: ಕಾಂಗ್ರೆಸ್ ಪಕ್ಷವು ನಿಷ್ಠಾವಂತ ಹಾಗೂ ಹಿರಿಯ ಕಾರ್ಯಕರ್ತರನ್ನು ಗುರುತಿಸಿ, ಪಕ್ಷಕ್ಕೆ ಅವರು ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಅವರನ್ನು ರಾಜ್ಯ ಸರಕಾರದ ವಿವಿಧ ನಿಗಮ, ಮಂಡಳಿಗಳಿಗೆ ನಿರ್ದೇಶಕರನ್ನಾಗಿ ನೇಮಿಸಿರುವುದು ಅತೀವ ಸಂತಸ ತಂದಿದೆ. ಈ ಮೂಲಕ ಪಕ್ಷವು ನಿಷ್ಠಾವಂತ ಕಾರ್ಯಕರ್ತರಿಗೆ ಗೌರವವನ್ನು ನೀಡಿದೆ ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ ಹೇಳಿದ್ದಾರೆ.
ಅವರು ಮಂಗಳೂರು ದಕ್ಷಿಣ ಬ್ಲಾಕ್ ಕಾಂಗ್ರೆಸ್ ಸಮಿತಿಯ ಮಾಸಿಕ ಸಭೆಯಲ್ಲಿ ಇತ್ತೀಚೆಗೆ ರಾಜ್ಯ ಸರಕಾರದ ವತಿಯಿಂದ ಕೆಎಸ್ಸಾರ್ಟಿಸಿ ನಿಗಮ ಮಂಡಳಿಗೆ ನಿರ್ದೇಶಕ ನೇಮಕಗೊಂಡ ಟಿ.ಕೆ. ಸುಧೀರ್ ಹಾಗೂ ಮೆಸ್ಕಾಂ ನಿರ್ದೇಶಕರಾಗಿ ನೇಮಕಗೊಂಡ ಜೆ. ಸದಾಶಿವ ಅಮೀನ್‌ರವರಿಗೆ ಅಭಿನಂದಿಸಿ ಮಾತನಾಡಿದರು.
ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆ ಹಾಗೂ ರಾಜ್ಯ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಸ್ಥಾನಗಳನ್ನು ಗೆಲ್ಲುವುದರ ಮೂಲಕ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದೆ ಎಂದು ತೋರಿಸಿಕೊಟ್ಟಿದೆ. ದೇಶದಲ್ಲಿ ಮೋದಿ ಸರಕಾರ ಚುನಾವಣೆಯ ಸಂದರ್ಭದಲ್ಲಿ ಕೊಟ್ಟ ಯಾವುದೇ ಆಶ್ವಾಸನೆಯನ್ನು ಪೂರೈಸದೇ ಇದ್ದುದರಿಂದ ತನ್ನ ವೈಫಲ್ಯಗಳನ್ನು ತೋರಿಸಿದೆ. ಇದರಿಂದ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಕುಗ್ಗುತ್ತಾ ಬಂದಿದೆ. ಮುಂದಿನ ಮಹಾಚುನಾವಣೆಯಲ್ಲಿ ಮತ್ತೆ ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬರಲಿದೆ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ವಿಧಾನಪರಿಷತ್‌ನ 4 ಸ್ಥಾನ ಹಾಗೂ ರಾಜ್ಯ ಸಭೆಯ 3 ಸ್ಥಾನಗಳನ್ನು ಗೆದ್ದುಕೊಳ್ಳುವುದರ ಮೂಲಕ ಕಾಂಗ್ರೆಸ್ ತನ್ನ ಬಲವನ್ನು ತೋರಿಸಿಕೊಂಡಿದೆ. 2018ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ನಾವು ಈಗಿಂದಲೇ ತಯಾರಿ ನಡೆಸಬೇಕು. ಸರಕಾರದ ಜನಪ್ರಿಯ ಕಾರ್ಯಕ್ರಮಗಳನ್ನು ಜನತೆಗೆ ತಲುಪಿಸುವಲ್ಲಿ ಶ್ರಮಿಸಬೇಕು ಎಂದರು.
ಬ್ಲಾಕ್ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಮಾಜಿ ಮೇಯರ್ ಜೆಸಿಂತಾ ಅಲ್ಫ್ರೆಡ್, ಕಾರ್ಪೊರೇಟರ್‌ಗಳಾದ ರತಿಕಲಾ, ಶೈಲಜಾ, ಕವಿತಾ ವಾಸು, ಪ್ರವೀಣ್ ಆಳ್ವ, ಆಶಾ ಡಿಸಿಲ್ವ, ಪಕ್ಷದ ಮುಖಂಡರಾದ ಪ್ರಭಾಕರ ಶ್ರೀಯಾನ್, ಎಂ. ಫಾರೂಕ್, ಶೇಖರ ಸುವರ್ಣ, ನಮಿತಾ ರಾವ್. ದುರ್ಗಾಪ್ರಸಾದ್, ರಮಾನಂದ ಪೂಜಾರಿ, ಸುರೇಶ್ ಶೆಟ್ಟಿ, ಬೆನೆಟ್ ಡಿಮೆಲ್ಲೊ, ಭಾಸ್ಕರ ರಾವ್, ಶಾಫಿ ಬೋಳಾರ, ಕೃತಿನ್ ಕುಮಾರ್, ಸುನಿಲ್ ದೇವಾಡಿಗ, ವಿದ್ಯಾ, ಹುಸೈನ್ ಬೋಳಾರ, ಸೀತಾರಾಮ, ಅಶ್ರಫ್ ಬಜಾಲ್, ರಫೀಕ್ ಕಣ್ಣೂರು ಮೊದಲಾದವರು ಉಪಸ್ಥಿತರಿದ್ದರು.







