ಇನ್ನು ವಿಮಾನಯಾನ ಅಗ್ಗ !
ನಾಗರೀಕ ವಿಮಾನಯಾನದ ಹೊಸ ನೀತಿಗೆ ಸಂಪುಟ ಅಸ್ತು

ಹೊಸದಿಲ್ಲಿ, ಜೂ.21: ವಿಮಾನ ಯಾನ ಸಂಸ್ಥೆಗಳ ಸಾಗರೋತ್ತರ ಹಾರಾಟ ನಿಯಮ ಸರಳೀಕರಣ, ಪ್ರಾದೇಶಿಕ ವಿಮಾನ ಸಂಪರ್ಕ ಹೆಚ್ಚಳ ಹಾಗೂ ಹೆಚ್ಚು ಜನರು ವಿಮಾನ ಬಳಸುವಂತೆ ಉತ್ತೇಜನವನ್ನು ಬಯಸಿದ್ದ. ಬಹು ವಿಳಂಬಿತ ನಾಗರಿಕ ವಿಮಾನ ಯಾನದ ಹೊಸ ನೀತಿಯೊಂದಕ್ಕೆ ಕೇಂದ್ರ ಸಂಪುಟವು ಬುಧವಾರ ಬೆಳಗ್ಗೆ ಅನುಮೋದನೆ ನೀಡಿದೆ.
ಸಣ್ಣ ನಗರಗಳು ಹಾಗೂ ಪಟ್ಟಣಗಳ ನಡುವಿನ ಒಂದು ತಾಸಿನೊಳಗಿನ ಪ್ರಯಾಣಕ್ಕೆ ರೂ.2,500 ಹಾಗೂ ಅರ್ಧ ಗಂಟೆಯೊಳಗಿನ ಪ್ರಯಾಣಕ್ಕೆ ರೂ.1200 ರ ಶುಲ್ಕ ಮಿತಿಯನ್ನು ನೀತಿಯು ಪ್ರಸ್ತಾವಿಸಿದೆ. ಸರಕಾರವು ಪ್ರಯಾಣ ದರವನ್ನು ಅಗ್ಗಗೊಳಿಸಿ, ಹೆಚ್ಚು ಜನರು ವಿಮಾನ ಯಾನ ಕೈಗೊಳ್ಳುವಂತಹ ವ್ಯವಸ್ಥೆಯೊಂದನ್ನು ಸರಕಾರ ಯೋಜಿಸಿದೆ.
ವಿಮಾನ ಸಂಸ್ಥೆಗಳಿಗೆ ಸಹಾಯ ಹಾಗೂ ಉತ್ತೇಜಕಗಳನ್ನು ನೀಡಿ ಸಣ್ಣ ಪಟ್ಟಣಗಳು ಹಾಗೂ ನಗರಗಳ ನಡುವಿನ ಮಾರ್ಗಗಳಲ್ಲಿ ಸಂಪರ್ಕ ಹೆಚ್ಚಿಸುವುದನ್ನು ನೀತಿ ಪ್ರಸ್ತಾವಿಸಿದೆ.
ಸರಕಾರವು ದೇಶಿ ವಲಯದಲ್ಲಿ 2022ದೊಳಗೆ ವರ್ಷಕ್ಕೆ 30 ಕೋಟಿ ಹಾಗೂ 2025ರೊಳಗೆ 50 ಕೋಟಿ ವಿಮಾನ ಟಿಕೆಟ್‌ಗಳ ಮಾರಾಟವನ್ನು ಕಾಣುವ ಆಶಾವಾದದಲ್ಲಿದೆ. ಅಂತಹ ಮಾರ್ಗಗಳಲ್ಲಿ ಹಾರಾಟದ ಮೂಲಕ ವಿಮಾನ ಸಂಸ್ಥೆಗಳಿಗಾಗುವ ನಷ್ಟದ ಶೇ.80ನ್ನು ಕೇಂದ್ರವು ಮರುಪಾವತಿಸುವುದೆಂದು ಅದು ಹೇಳಿದೆ.
ಅಂತಾರಾಷ್ಟ್ರೀಯ ಪ್ರಯಾಣಕ್ಕೆ ವಾರ್ಷಿಕ ಟಿಕೆಟ್ ಮಾರಾಟದ ಗುರಿ 2027ರೊಳಗೆ 20 ಕೋಟಿಯಾಗಿದೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ಹಾರಾಟಗಳಲ್ಲಿ ಪ್ರಾದೇಶಿಕ ಸಂಪರ್ಕ ನಿಧಿಗೆ ಶೇ.2 ತೆರಿಗೆ ವಿಧಿಸುವ ಪ್ರಸ್ತಾವ ಕರಡು ನೀತಿಯಲ್ಲಿದೆ.
20 ವಿಮಾನಗಳಿರುವ ಹೊಸ ವಿಮಾನ ಸಂಸ್ಥೆಗಳಿಗೆ ಅಂತಾರಾಷ್ಟ್ರೀಯ ವಿಮಾನ ಸಂಚಾರ ನಡೆಸಲು ಅವಕಾಶ ನೀಡುವ ಪ್ರಸ್ತಾವವೊಂದನ್ನು ವಾಯು ಯಾನ ಉದ್ಯಮವು ನೀತಿಯಲ್ಲಿ ಎದುರು ನೋಡುತ್ತಿದೆ. ಪ್ರಸ್ತುತ, ಕೇವಲ 20 ವಿಮಾನ ಗಳಿಸುವುದು ಮಾತ್ರವಲ್ಲದೆ ದೇಶೀಯ ಹಾರಾಟದಲ್ಲಿ ಕನಿಷ್ಠ 5 ವರ್ಷ ಅನುಭವವಿರುವ ವಿಮಾನ ಸಂಸ್ಥೆಗಳಿಗಷ್ಟೇ ಅಂತಾರಾಷ್ಟ್ರೀಯ ಕಾರ್ಯಾಚರಣೆಗೆ ಅವಕಾಶವಿದೆ.
ಈ ನೀತಿಯ ಬಗ್ಗೆ ಕಳೆದ 18 ತಿಂಗಳುಗಳಲ್ಲಿ ವಿವಿಧ ಸಚಿವಾಲಯಗಳ ನಡುವೆ ಹಲವು ಸುತ್ತುಗಳ ಚರ್ಚೆ ನಡೆದಿದೆ. 2015ರಲ್ಲಿ ಈ ಕರಡು ನೀತಿಯನ್ನು ಪರಿಷ್ಕರಿಸಲಾಗಿತ್ತು.







