ನಿಷೇಧವಿದ್ದರೂ ದಡ ಸೇರದ ಮರಳುಗಾರಿಕೆ ಬೋಟ್‌ಗಳು!
ಬೋಟ್ ಜೊತೆ ತಾತ್ಕಾಲಿಕ ಶೆಡ್‌ಗಳ ತೆರವಿಗೆ ಡಿಸಿ ಆದೇಶ
ಮಂಗಳೂರು,ಜೂ.15: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆಯನ್ನು ಜೂ.15ರಿಂದ ಎರಡು ತಿಂಗಳ ಅವಧಿಗೆ ನಿಷೇಧಿಸಿ ಆದೇಶ ನೀಡಲಾಗಿದ್ದರೂ, ಇಂದು ತನ್ನ ಭೇಟಿಯ ವೇಳೆ ನದಿಗಳಲ್ಲಿ ಮರಳುಗಾರಿಕೆಯಲ್ಲಿ ತೊಡಗಿದ್ದನ್ನು ಗಮನಿಸಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ತಕ್ಷಣ ನೀರಿನಿಂದ ಬೋಟ್‌ಗಳನ್ನು ತೆರವುಗೊಳಿಸುವಂತೆ ಆದೇಶಿಸಿದ್ದಾರೆ.
ಮಾತ್ರವಲ್ಲದೆ, ಮರಳು ಸಂಗ್ರಹ ಪ್ರದೇಶದಲ್ಲಿ ಸರಕಾರಿ ಸ್ಥಳಗಳಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಮರಳು ಶೆಡ್‌ಗಳನ್ನು ಕೂಡಾ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಅನಧಿಕೃತ ಮರಳುಗಾರಿಕೆ, ಮರಳು ಗಣಿಗಾರಿಕೆ ಹಾಗೂ ಸಾಗಾಟವನ್ನು ನಿಯಂತ್ರಿಸಲು ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಚರ್ಚಿಸಿ ಸಮಿತಿಯ ತೀರ್ಮಾನದಂತೆ ತಾಲೂಕು ಮಟ್ಟದ ತಂಡಗಳನ್ನು ರಚಿಸಿ, ತಂಡಗಳಿಗೆ ಆಯಾ ವ್ಯಾಪ್ತಿಯಲ್ಲಿ ಕ್ರಮಕ್ಕೆ ಕಾರ್ಯಾದೇಶ ನೀಡಲಾಗಿದೆ. ತಂಡಗಳು ಕಾರ್ಯ ನಿರ್ವಹಿಸುವ ಬಗ್ಗೆ ತಾಲೂಕು ಮಟ್ಟದ ಸಮಿತಿ ಸಭೆ ಕರೆದು ಚರ್ಚಿಸಿ, ಅನಧಿಕೃತ ಗಣಿಗಾರಿಕೆ ಮತ್ತು ಸಾಗಾಟವನ್ನು ತಡೆಯಲು ಕಟ್ಟುನಿಟ್ಟಿನ ಕ್ರಮ ವಹಿಸಿ ವರದಿಯನ್ನು ಆಯಾ ಉಪ ವಿಭಾಗಾಧಿಕಾರಿಗಳಿಗೆ ನೀಡಬೇಕು.
ಕೈಗೊಳ್ಳಬೇಕಾದ ಕ್ರಮಗಳು
- ಮರಳುಗಾರಿಕೆ ವ್ಯಾಪ್ತಿಯ ಮರಳು ಬಾರ್ಸ್ ಮತ್ತು ಮರಳು ಬ್ಲಾಕ್‌ಗಳಲ್ಲಿ ಮರಳಿನ ದಕ್ಕೆಗಳಲ್ಲಿರುವ ಮರಳು ಬೋಟ್‌ಗಳನ್ನು ನೀರು ಮತ್ತು ದಡದಿಂದ ತೆರವುಗೊಳಿಸಬೇಕು. *ಮರಳು ಸಂಗ್ರಹ ಪ್ರದೇಶದಲ್ಲಿನ ಸರಕಾರಿ ಸ್ಥಳದಲ್ಲಿ ನಿರ್ಮಿಸಿರುವ ತಾತ್ಕಾಲಿಕ ಮರಳು ಶೆಡ್‌ಗಳನ್ನು ತೆರವುಗೊಳಿಸಬೇಕು.
- ಮರಳುಗಾರಿಕೆ ಪರವಾನಿಗೆ ನೀಡಿರುವ ಪರವಾನಿಗೆದಾರರು ಮರಳು ಶೇಖರಣಾ ಪ್ರದೇಶಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು.
- ಮರಳುಗಾರಿಕೆಗೆ ಬಳಸಿದ ಬೋಟ್‌ಗಳನ್ನು ನದಿಯಿಂದ ತೆಗೆದು ಮರಳುಗಾರಿಕೆ ಪ್ರದೇಶದಿಂದ ಕನಿಷ್ಠ 2 ಕಿ.ಮೀ. ದೂರದಲ್ಲಿ ಇಡತಕ್ಕದ್ದು.
- ಗುತ್ತಿಗೆದಾರರು ಮತ್ತು ಇತರೆ ಯಾವುದೇ ಕಾರ್ಮಿಕರು ಮರಳುಗಾರಿಕೆ ಪ್ರದೇಶದಲ್ಲಿ ಜೆಸಿಬಿ, ಲಾರಿ, ಡೋಝರ್, ಕ್ರೇನ್, ಹಿಟಾಚಿ ಹಾಗೂ ಇತರ ಯಾವುದೇ ಯಂತ್ರಗಳನ್ನು ಇಡುವಂತಿಲ್ಲ. ಈ ಸೂಚನೆಗಳನ್ನು ಪಾಲಿಸದಿರುವ ಪರವಾನಿಗೆದಾರರ ಮರಳುಗಾರಿಕೆ ಉಪಯೋಗಿಸುವ ದೋಣಿ, ಜೆಸಿಬಿ, ಲಾರಿ ಇತರ ವಾಹನಗಳನ್ನು ಜಪ್ತಿ ಮಾಡಿ ದೂರು ದಾಖಲಿಸಲು ಗಣಿ ಇಲಾಖೆ ಹಾಗೂ ತಹಶೀಲ್ದಾರರಿಗೆ ನಿರ್ದೇಶಿಸಲಾಗಿದೆ.
ತನಿಖಾ ಠಾಣೆಗಳಲ್ಲಿ ಮರಳು ವಾಹನ ತಪಾಸಣೆ ಕಡ್ಡಾಯ
ಮರಳುಗಾರಿಕೆ ನಿಷೇಧಿಸಲ್ಪಟ್ಟಿರುವ ಜೂ.15ರಿಂದ ಆಗಸ್ಟ್ 15ರ ಅವಧಿಯಲ್ಲಿ ಅನಧಿಕೃತ ಮರಳುಗಾರಿಕೆ ಹಾಗೂ ಸಾಗಾಟವನ್ನು ತಡೆಯುವ ನಿಟ್ಟಿನಲ್ಲಿ ತನಿಖಾ ಠಾಣೆಗಳಲ್ಲಿ ಪ್ರತಿ ವಾಹನದ ಸರಕನ್ನು ಕೂಲಂಕುಷವಾಗಿ ಪರಿಶೀಲಿಸಿ, ಮರಳು ಸಾಗಾಟ ಕಂಡು ಬಂದಲ್ಲಿ ವಾಹನವನ್ನು ಮುಟ್ಟುಗೋಲು ಹಾಕಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.
ಬಂಟ್ವಾಳದ ಉಕ್ಕುಡ, ಬೆಳ್ತಂಗಡಿಯ ಚಾರ್ಮಾಡಿ, ಪುತ್ತೂರಿನ ಗುಂಡ್ಯ, ಸುಳ್ಯದ ಜಾಲ್ಸೂರು, ಕಲ್ಲುಗುಂಡಿ, ಸಂಪಾಜೆ, ಮಂಗಳೂರಿನ ತಲಪಾಡಿ, ಮುಕ್ಕ, ವಾಮಂಜೂರು, ಸುರತ್ಕಲ್ ಮೊದಲಾದ ಕಡೆಗಳಲ್ಲಿ ತನಿಖಾ ಠಾಣೆಗಳು ಕಾರ್ಯ ನಿರ್ವಹಿಸಲಿದ್ದು, ವಾಹನಗಳನ್ನು ತಪಾಸಣೆಗೊಳಪಡಿಸಲಿವೆ ಎಂದು ಜಿಲ್ಲಾಧಿಕಾರಿ ಪ್ರಕಟನೆ ತಿಳಿಸಿದೆ.
‘‘ಮರಳುಗಾರಿಕೆ ನಿಷೇಧದ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ, ಸಹಾಯಕ ಆಯುಕ್ತರು, ತಹಶೀಲ್ದಾರರು ಸೇರಿದಂತೆ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಜಿಲ್ಲೆಯಾದ್ಯಂತ ಮರಳುಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಾನು ಕೂಡಾ ಗುರುಪುರ ನದಿ ವ್ಯಾಪ್ತಿಯ ಕೂಳೂರು, ಮರವೂರು, ಮುತ್ತೂರು ಮೊದಲಾದ ಕಡೆ ಭೇಟಿ ನೀಡಿ ಪರಿಶೀಲಿಸಿದ್ದೇನೆ.
ಈ ಸಂದರ್ಭ ನದಿಗಳಲ್ಲಿ ಬೋಟ್‌ಗಳಲ್ಲಿ ಮರಳುಗಾರಿಕೆ ನಡೆಸುತ್ತಿರುವುದು ಕಂಡು ಬಂದಿದ್ದು, ತಕ್ಷಣ ಬೋಟ್‌ಗಳನ್ನು ನದಿಯಿಂದ ತೆರವುಗೊಳಿಸಲು ಸೂಚಿಸಲಾಗಿದೆ. ತಾತ್ಕಾಲಿಕ ಶೆಡ್‌ಗಳನ್ನೂ ತೆರವುಗೊಳಿಸಲು ನಿರ್ದೇಶಿಸಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಮರಳುಗಾರಿಕೆ ನಡೆಸುವವರು ಕ್ರಮಕೈಗೊಳ್ಳದಿದ್ದರೆ ಅಧಿಕಾರಿಗಳು ಜೆಸಿಬಿ ಮೂಲಕ ತೆರವುಗೊಳಿಸುವ ಕಾರ್ಯ ನಡೆಸಲಿದ್ದಾರೆ’’ ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹೀಂ ‘ವಾರ್ತಾಭಾರತಿ’ಗೆ ಪ್ರತಿಕ್ರಿಯೆ ನೀಡಿದ್ದಾರೆ.






.jpg.jpg)



