ಭಾರತಕ್ಕೆ ವಿಶೇಷ ಸ್ಥಾನಮಾನ ಮಾನ್ಯತೆ ನೀಡಲು ಅಮೆರಿಕ ಸೆನೆಟ್ ವಿಫಲ

ವಾಷಿಂಗ್ಟನ್,ಜೂ.15: ರಫ್ತು ನಿಯಂತ್ರಣ ನಿಯಮಾವಳಿಗಳ ಪರಿಷ್ಕರಣೆಗೆ ಅಗತ್ಯವಾಗಿರುವ ಮುಖ್ಯ ತಿದ್ದುಪಡಿಯೊಂದು ಅಂಗೀಕಾರಗೊಳ್ಳದ ಹಿನ್ನೆಲೆಯಲ್ಲಿ ಭಾರತಕ್ಕೆ ಅಮೆರಿಕದ ‘ಜಾಗತಿಕ ವ್ಯೆಹಾತ್ಮಕ ಮತ್ತು ರಕ್ಷಣಾ ಪಾಲುದಾರ ’ನೆಂದು ಮಾನ್ಯತೆ ನೀಡುವಲ್ಲಿ ಸೆನೆಟ್ ವಿಫಲಗೊಂಡಿದೆ.
ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚಿಗೆ ಕಾಂಗ್ರೆಸಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ಮರುದಿನ ಹಿರಿಯ ರಿಪಬ್ಲಿಕನ್ ಸೆನೆಟರ್ ಜಾನ್ ಮೆಕ್ಕೇನ್ ಅವರು ರಾಷ್ಟ್ರೀಯ ರಕ್ಷಣಾ ಅನುಜ್ಞಾ ಕಾಯ್ದೆ(ಎನ್‌ಡಿಡಿಎ-17)ಗೆ ತಿದ್ದುಪಡಿಯೊಂದನ್ನು ಮಂಡಿಸಿದ್ದರು. ಈ ತಿದ್ದುಪಡಿ ಅಂಗೀಕಾರಗೊಂಡಿದ್ದಿದ್ದರೆ ಭಾರತವು ಜಾಗತಿಕ ವ್ಯೆಹಾತ್ಮಕ ಮತ್ತು ರಕ್ಷಣಾ ಪಾಲುದಾರನೆಂಬ ಮಾನ್ಯತೆಯನ್ನು ಗಳಿಸುತ್ತಿತ್ತು.
ಮೋದಿ ಮತ್ತು ಅಧ್ಯಕ್ಷ ಬರಾಕ್ ಒಬಾಮಾ ಅವರ ನಡುವೆ ಮಾತುಕತೆಗಳ ಬಳಿಕ ಹೊರಡಿಸಲಾಗಿದ್ದ ಜಂಟಿ ಹೇಳಿಕೆಯಲ್ಲಿ ಅಮೆರಿಕವು ಭಾರತವನ್ನು ‘ಪ್ರಮುಖ ರಕ್ಷಣಾ ಪಾಲುದಾರ ’ಎಂದು ಗುರುತಿಸಿತ್ತು. ಇದು ಭಾರತಕ್ಕೆ ರಕ್ಷಣೆಗೆ ಸಂಬಂಧಿತ ವ್ಯಾಪಾರ ಮತ್ತು ತಂತ್ರಜ್ಞಾನ ವರ್ಗಾವಣೆಯನ್ನು ಬೆಂಬಲಿಸಿದ್ದು, ಅದನ್ನು ಅಮೆರಿಕದ ನಿಕಟ ಮಿತ್ರರ ಸರಿಸಮಾನವೆಂದು ಪರಿಗಣಿಸಿದೆ.
ಎನ್‌ಡಿಡಿಎ ಸೆನೆಟ್‌ನಲ್ಲಿ 85-13 ದ್ವಿಪಕ್ಷೀಯ ಮತಗಳ ಭಾರೀ ಬಹುಮತದೊಂದಿಗೆ ಅಂಗೀಕಾರಗೊಂಡಿತ್ತು. ಆದರೆ ಎಸ್‌ಎ 4618 ಸೇರಿದಂತೆ ಕೆಲವು ಮುಖ್ಯ ತಿದ್ದುಪಡಿಗಳು ದ್ವಿಪಕ್ಷೀಯ ಬೆಂಬಲ ಹೊಂದಿದ್ದರೂ ಸೆನೆಟ್‌ನಲ್ಲಿ ಅಂಗೀಕಾರಗೊಳ್ಳಲು ಸಾಧ್ಯವಾಗಿಲ್ಲ. ಇದಕ್ಕಾಗಿ ಮೆಕ್ಕೇನ್ ನಿರಾಶೆಯನ್ನು ವ್ಯಕ್ತಪಡಿಸಿದರು.
ನಮ್ಮ ರಾಷ್ಟ್ರೀಯ ಭದ್ರತೆಗೆ ನಿರ್ಣಾಯಕವಾಗಿದ್ದ ಹಲವಾರು ವಿಷಯಗಳಲ್ಲಿ ಚರ್ಚಿಸಲು ಮತ್ತು ಮತ ಹಾಕಲು ಸೆನೆಟ್‌ಗೆ ಸಾಧ್ಯವಾಗದಿರುವುಕ್ಕೆ ತಾನು ವಿಷಾದಿಸುತ್ತೇನೆ. ಈ ಪೈಕಿ ಹೆಚ್ಚಿನವು ಭಾರೀ ದ್ವಿಪಕ್ಷೀಯ ಬೆಂಬಲವನ್ನು ಹೊಂದಿದ್ದವು ಎಂದು ಹೇಳಿದ ಅವರು, ಯುದ್ಧಸಂದರ್ಭದಲ್ಲಿ ಅಮೆರಿಕಕ್ಕೆ ನೆರವಾಗಲು ತಮ್ಮ ಜೀವಗಳನ್ನು ಅಪಾಯಕ್ಕೊಡ್ಡಿದ್ದ ಮತ್ತು ಈಗಲೂ ಜೀವ ಬೆದರಿಕೆಯನ್ನು ಎದುರಿಸುತ್ತಿರುವ ಅಫಘಾನಿಗಳಿಗೆ ವಿಶೇಷ ವಲಸಿಗ ವೀಸಾಗಳ ಸಂಖ್ಯೆಯನ್ನು ಹೆಚ್ಚಿಸಲು ಸೆನೆಟ್‌ಗೆ ಸಾಧ್ಯವಾಗದಿರುವುದು ತನಗೆ ವಿಶೇಷ ನಿರಾಸೆಯನ್ನುಂಟು ಮಾಡಿದೆ ಎಂದರು.
ಕಳೆದೆರಡು ದಶಕಗಳಲ್ಲಿ ಅಮೆರಿಕ ಮತ್ತು ಭಾರತಗಳ ನಡುವಿನ ಸಂಬಂಧ ಅಭಿವೃದ್ಧಿಯಾಗಿದ್ದು, ಅವುಗಳ ನಡುವೆ ಬಹುಮುಖಿ,ಜಾಗತಿಕ ವ್ಯೆಹಾತ್ಮಕ ಮತ್ತು ರಕ್ಷಣಾ ಪಾಲುದಾರಿಕೆ ಮೂಡಿಬಂದಿದೆ. ಪರಸ್ಪರ ಏಳಿಗೆ,ಹೆಚ್ಚಿನ ಆರ್ಥಿಕ ಸಹಕಾರ,ಪ್ರಾದೇಶಿಕ ಶಾಂತಿ,ಭದ್ರತೆ ಮತ್ತು ಸ್ಥಿರತೆಯನ್ನು ಉತ್ತೇಜಿಸಿರುವ ಇವೆರಡೂ ರಾಷ್ಟ್ರಗಳು ಪ್ರಜಾತಾಂತ್ರಿಕ ವೌಲ್ಯಗಳನ್ನು ಹಂಚಿಕೊಂಡಿದ್ದು, ತನ್ಮೂಲಕ ಈ ಪಾಲುದಾರಿಕೆ ಆಳವಾಗಿ ಬೇರೂರಿದೆ ಎಂದು ಮೆಕ್ಕೇನ್ ಮಂಡಿಸಿದ್ದ ತಿದ್ದುಪಡಿಯು ಹೇಳಿದೆ.







