ಇಶ್ರತ್ ಪ್ರಕರಣದ ಮಾಹಿತಿ ಕೇಳಿದ ಆರ್‌ಟಿಐ
ಭಾರತೀಯನೆಂದು ಸಾಬೀತು ಪಡಿಸಲು ಗೃಹಸಚಿವಾಲಯ ಸೂಚನೆ

ಹೊಸದಿಲ್ಲಿ, ಜೂ.15: ಅಪೂರ್ವ ವಿದ್ಯಮಾನವೊಂದರಲ್ಲಿ ಆರ್‌ಟಿಐ ಅರ್ಜಿದಾರನೊಬ್ಬನಿಗೆ ತಾನು ಭಾರತೀಯನಾಗಿದ್ದೇನೆಂದು ಸಾಬೀತುಪಡಿಸುವಂತೆ ಕೇಂದ್ರ ಗೃಹ ಸಚಿವಾಲಯ ಸೂಚಿಸಿದೆ.
ಇಶ್ರತ್ ಜಹಾನ್ ನಕಲಿ ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದ ಕಾಣೆಯಾಗಿರುವ ಕಡತಗಳ ಬಗ್ಗೆ ವಿಚಾರಣೆಗಾಗಿ ರಚಿಸಲಾಗಿರುವ ಏಕ ಸದಸ್ಯ ಆಯೋಗದ ಕುರಿತು ಮಾಹಿತಿಯನ್ನು ಅರ್ಜಿದಾರ ಕೇಳಿದ್ದರು. ಅದನ್ನು ಬಹಿರಂಗಪಡಿಸಬೇಕಾದರೆ ಆರ್‌ಟಿಐ ಅರ್ಜಿದಾರ ಭಾರತೀಯ ಪ್ರಜೆಯೆಂಬುದನ್ನು ಸಾಬೀತುಪಡಿಸಬೇಕೆಂದು ಸಚಿವಾಲಯ ಉತ್ತರಿಸಿದೆ.
ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ, ಹಿರಿಯ ಐಎಎಸ್ ಅಧಿಕಾರಿ ವಿಚಾರಣಾ ಆಯೋಗದ ನೇತೃತ್ವ ವಹಿಸಿದ್ದಾರೆ.
ಆಯೋಗವು ಸಲ್ಲಿಸಿರುವ ವರದಿಗಳ ಪ್ರತಿ ಹಾಗೂ ಪ್ರಸಾದ್‌ರ ಸೇವಾವಧಿ ವಿಸ್ತರಣೆಗೆ ಸಂಬಂಧಿಸಿದ ಕಡತ ಟಿಪ್ಪಣಿಗಳ ಪ್ರತಿಗಳನ್ನು ನೀಡುವಂತೆ ಅರ್ಜಿದಾರರು ಗೃಹ ಸಚಿವಾಲಯವನ್ನು ಕೇಳಿದ್ದರು.
‘‘ಈ ಸಂಬಂಧ ದಯಮಾಡಿ ನಿಮ್ಮ ಭಾರತೀಯ ಪೌರತ್ವದ ಕುರಿತು ಪುರಾವೆಯನ್ನು ಒದಗಿಸುವಂತೆ ಮನವಿ ಮಾಡಲಾಗಿದೆ’’ ಎಂದು ಗೃಹ ಸಚಿವಾಲಯ ತನ್ನ ಉತ್ತರದಲ್ಲಿ ಹೇಳಿತ್ತು.
ಮಾಹಿತಿ ಹಕ್ಕು ಕಾಯ್ದೆ-2015ರನ್ವಯ ಭಾರತೀಯ ನಾಗರಿಕರು ಮಾತ್ರ ಮಾಹಿತಿಯನ್ನು ಕೇಳಬಹುದಾಗಿದೆ.
ಸಾಮಾನ್ಯವಾಗಿ ಪಾರದರ್ಶಕತಾ ಕಾಯ್ದೆಯನ್ವಯ ಅರ್ಜಿ ಸಲ್ಲಿಸಲು ಪೌರತ್ವದ ಪುರಾವೆ ಒದಗಿಸಬೇಕಾಗಿಲ್ಲ. ಅಪೂರ್ವ ಪ್ರಕರಣಗಳಲ್ಲಿ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಅರ್ಜಿದಾರನ ಪೌರತ್ವದ ಕುರಿತು ಅನುಮಾನವಿದ್ದರೆ ಅದನ್ನು ಕೇಳಬಹುದಾಗಿದೆ.
ಮಾಹಿತಿಯ ಮುಕ್ತ ಹರಿವನ್ನು ತಡೆಯುವ ಮಾರ್ಗ ಇದಾಗಿದೆ. ಭಾರತೀಯ ಪೌರತ್ವದ ಪುರಾವೆ ಕೇಳುವುದನ್ನು ಉತ್ತೇಜಿಸಲೇ ಬಾರದು. ಕೇಳಿರುವ ಮಾಹಿತಿಯನ್ನು ಗೃಹ ಸಚಿವಾಲಯ ವಿಳಂಬಿಸುತ್ತಿರುವಂತೆ ತೋರುತ್ತಿದೆಯೆಂದು ಆರ್‌ಟಿಐ ಕಾರ್ಯಕರ್ತ ಅಜಯ್ ದುಬೆ ಎಂಬವರು ಪ್ರತಿಕ್ರಿಯಿಸಿದ್ದಾರೆ.
ತಮಿಳುನಾಡು ಕೇಡರ್‌ನ 1983ರ ತಂಡದ ಐಎಎಸ್ ಅಧಿಕಾರಿ ಪ್ರಸಾದ್ ಮೇ 31ರಂದು ನಿವೃತ್ತರಾಗಬೇಕಿತ್ತು. ಅವರಿಗೆ ಜು.31ರ ವರೆಗೆ 2 ತಿಂಗಳ ಸೇವಾ ವಿಸ್ತರಣೆ ನೀಡಲಾಗಿದೆ.
ಈ ವರ್ಷ ಮಾರ್ಚ್‌ನಲ್ಲಿ ಸಂಸತ್ತಿನಲ್ಲಿ ಭಾರೀ ಕೋಲಾಹಲ ನಡೆದ ಬಳಿಕ, ಕಾಣೆಯಾಗಿರುವ ಕಡತಗಳ ಕುರಿತಾದ ಸಂಪೂರ್ಣ ತನಿಖೆ ನಡೆಸುವಂತೆ ಗೃಹ ಸಚಿವಾಲಯ ಪ್ರಸಾದ್‌ರಿಗೆ ಸೂಚಿಸಿತ್ತು. ಆಯೋಗ ತನ್ನ ವರದಿಯನ್ನು ಇನ್ನಷ್ಟೇ ಸಲ್ಲಿಸಬೇಕಿದೆ.







