ಕೋಮು ರಾಜಕೀಯದ ಸಂಚಿನ ವಿರುದ್ಧ ಒಂದಾದ ಕೈರಾನ ಗ್ರಾಮಸ್ಥರು

ಕೈರಾನ, ಜೂ . 15 : ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾನದ ಜನತೆ ಬೀದಿಗಿಳಿದಿದ್ದಾರೆ. ಆದರೆ ಸಂತಸದ ಸಂಗತಿ ಏನೆಂದರೆ, ಅವರು ಸದ್ಯ ಆ ಗ್ರಾಮದ ಬಗ್ಗೆ ನಡೆಯುತ್ತಿರುವ ಅಪಪ್ರಚಾರಕ್ಕೆ ಬಲಿಯಾಗಿ ಒಬ್ಬರ ವಿರುದ್ಧ ಒಬ್ಬರು ತೋಳೇರಿಸಿ ಬೀದಿಗಿಳಿದಿಲ್ಲ. ತಮ್ಮ ಗ್ರಾಮದಿಂದ ಬೆದರಿಕೆಗೆ ಒಳಗಾಗಿ ಹಿಂದೂ ಕುಟುಂಬಗಳು ಗುಳೇ ಹೋಗುತ್ತಿವೆ ಎಂದು ಬಿಜೆಪಿ ಸಂಸದ ಹುಕುಂ ಸಿಂಗ್ ಮಾಡಿದ ಆರೋಪ ಹಾಗು ಅದನ್ನು ಆಧರಿಸಿ ಆ ಬಳಿಕ ನಡೆಯುತ್ತಿರುವ ರಾಜಕೀಯದ ವಿರುದ್ಧ ಗ್ರಾಮದ ಹಿಂದೂ ಮುಸ್ಲಿಮರು ಒಂದಾಗಿ ತಮ್ಮ ಧಾರ್ಮಿಕ ಗುರುಗಳ ನೇತೃತ್ವದಲ್ಲಿ ಮೆರವಣಿಗೆ ಮಾಡಿದ್ದಾರೆ.
ಮೊದಲು ಮುಸ್ಲಿಮರ ಬೆದರಿಕೆಯಿಂದಾಗಿ ಹಿಂದೂಗಳು ವಲಸೆ ಹೋಗುತ್ತಿದ್ದಾರೆ ಎಂದು ಆರೋಪ ಮಾಡಿದ್ದ ಹುಕುಂ ಸಿಂಗ್ ಬಳಿಕ ತಮ್ಮ ರಾಗ ಬದಲಿಸಿದ್ದರು. ಜೊತೆಗೆ ಹಲವು ರಾಷ್ಟ್ರ ಮಟ್ಟದ ಪತ್ರಿಕೆಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಹುಕುಂ ಸಿಂಗ್ ಆರೋಪದಲ್ಲಿ ಹುರುಳಿಲ್ಲ ಎಂದು ತಿಳಿದು ಬಂದಿತ್ತು.
ಇದೀಗ ಕೈರಾನದ ಜನತೆ ಸ್ವತಹ ಬೀದಿಗೆ ಬಂದು ತಮ್ಮ ಊರಿನ ಸೌಹಾರ್ದ ಕಾಪಾಡಲು ಹೆಜ್ಜೆ ಹಾಕಿದ್ದಾರೆ. ಈ ಚಿತ್ರವನ್ನು ಸಾಮಾಜಿಕ ಕಾರ್ಯಕರ್ತ, ' ಟ್ರುತ್ ಆಫ್ ಗುಜರಾತ್ ' ವೆಬ್ ಸೈಟ್ ಸ್ಥಾಪಕ ಪ್ರತೀಕ್ ಸಿನ್ಹ ಫೇಸ್ ಬುಕ್ ನಲ್ಲಿ ಹಾಕಿದ್ದಾರೆ.







