ಕನಿಷ್ಠ 70 ಮಂದಿಯನ್ನು ರಕ್ಷಿಸಿದ ಯೋಧ ಇಮ್ರಾನ್ ಯೂಸುಫ್
ಒರ್ಲ್ಯಾಂಡೋ ಗೇ ಕ್ಲಬ್ ಹತ್ಯಾಕಾಂಡ

ವಾಶಿಂಗ್ಟನ್ , ಜೂ. 15: ಒರ್ಲ್ಯಾಂಡೋ ಗೇ ಕ್ಲಬ್ ಹತ್ಯಾಕಾಂಡದಲ್ಲಿ ಜೀವ ಪಣಕ್ಕಿಟ್ಟು ಹಲವಾರು ಜನರನ್ನು ರಕ್ಷಿಸಿದ ಯೋಧ ಇಮ್ರಾನ್ ಯೂಸುಫ್ ಈಗ ಅಮೇರಿಕಾದಲ್ಲಿ ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇತ್ತೀಚಿನವರೆಗೂ ಆಫ್ಘಾನಿಸ್ತಾನದಲ್ಲಿ ಸೇವೆ ಸಲ್ಲಿಸಿರುವ ಅಮೇರಿಕನ್ ಯೋಧ ಇಮ್ರಾನ್ ಹತ್ಯಾಕಾಂಡ ನಡೆದ ಪಲ್ಸ್ ಕ್ಲಬ್ ನಲ್ಲಿ ಬೌನ್ಸರ್ ಆಗಿ ಕೆಲಸ ಮಾಡುತ್ತಿದ್ದರು. ರವಿವಾರ ಬೆಳಗ್ಗಿನ ಜಾವ ಇದ್ದಕ್ಕಿದ್ದಂತೆ ಗುಂಡಿನ ದಾಳಿಯ ಶಬ್ದ ಕೇಳಿ ಆಘಾತಗೊಂಡ ಇಮ್ರಾನ್ ನೊಳಗಿನ ಯೋಧ ತಕ್ಷಣ ಜಾಗೃತ ನಾಗಿದ್ದಾನೆ.
" ಸತತ ಗುಂಡಿನ ದಾಳಿಯಿಂದ ಬೆಚ್ಚಿಬಿದ್ದ ಅಲ್ಲಿದ್ದವರೆಲ್ಲರೂ ಸ್ಥಂಭೀಭೂತರಾಗಿ ನಿತ್ತು ಬಿಟ್ಟರು. ನಾನು ನೋಡುವಾಗ ಅಲ್ಲಿ ಒಂದು ಬಾಗಿಲು ಇತ್ತು. ಅದನ್ನು ತೆರೆದರೆ ನಾವು ಹೊರಗೆ ಹೋಗಬಹುದಿತ್ತು. ಆದರೆ ಒಬ್ಬರೂ ಬಾಗಿಲವರೆಗೆ ಹೋಗಲು ತಯಾರಿರಲಿಲ್ಲ . ಎಲ್ಲಿ ಗುಂಡು ಬೀಳುತ್ತದೋ ಎಂಬ ಭಯ. ನಾನು ಯೋಚಿಸಿದೆ. ಒಂದೋ ನಾವೆಲ್ಲರೂ ಇಲ್ಲೇ ಇದ್ದು ಸಾಯಬೇಕು. ಇಲ್ಲದಿದ್ದರೆ ಯಾರಾದರು ಒಬ್ಬರು ಮುಂದೆ ಹೋಗಿ ಬಾಗಿಲು ತೆರೆಯಬೇಕು. ನಾನು ತಕ್ಷಣ ಹಾರಿ ಬಾಗಿಲು ತೆರೆದೇ ಬಿಟ್ಟೆ ಹಾಗು ಸಾಧ್ಯವಾದಷ್ಟು ಮಂದಿಯನ್ನು ಹೊರಗೆ ಕಳಿಸಿದೆ. ಇದರಿಂದಾಗಿ ಕನಿಷ್ಠ 70 ಮಂದಿಯ ಪ್ರಾಣ ಉಳಿಯಿತು ಎಂದು ಹೇಳಲಾಗಿದೆ.
" ಈಗ ಎಲ್ಲರೂ ನನ್ನನ್ನು ಹೀರೋ ಎನ್ನುತ್ತಿದ್ದಾರೆ. ನಾನು ಆ ಕ್ಷಣಕ್ಕೆ ಪ್ರತಿಕ್ರಿಯಿಸಿದೆ ಅಷ್ಟೇ . ನನ್ನ ಸುತ್ತಮುತ್ತ ಇದ್ದವರನ್ನು ರಕ್ಷಿಸಬೇಕು ಎಂದು ನನಗನಿಸಿತು. ಅದಕ್ಕೆ ನನ್ನಿಂದ ಸಾಧ್ಯವಾದದನ್ನು ಮಾಡಿದೆ. ಇನ್ನಷ್ಟು ಜನರನ್ನು ಅಲ್ಲಿಂದ ಬಚಾವ್ ಮಾಡಲು ನಾನು ಬಯಸಿದ್ದೆ . ಈಗ ನನ್ನ ಬಗ್ಗೆ ಮಾತಾಡುವುದಕ್ಕಿಂತ ಸಂತ್ರಸ್ತರ ಕಡೆ ಗಮನ ಹರಿಸುವುದು ಉತ್ತಮ " ಎಂದು ಪ್ರತಿಕ್ರಿಯಿಸಿದ್ದಾರೆ ಇಮ್ರಾನ್.





