ಒರ್ಲಾಂಡೊ ಹಂತಕನ ಪತ್ನಿಗೆ ದಾಳಿಯ ಬಗ್ಗೆ ಗೊತ್ತಿತ್ತು
ಶೀಘ್ರವೇ ಆರೋಪ ದಾಖಲು: ಅಧಿಕಾರಿಗಳು
.jpg)
ಒರ್ಲಾಂಡೊ, ಜೂ. 15: ಅಮೆರಿಕದ ಒರ್ಲಾಂಡೊದಲ್ಲಿರುವ ಸಲಿಂಗಿಗಳ ನೈಟ್‌ಕ್ಲಬ್ ಒಂದರಲ್ಲಿ 49 ಜನರ ಮಾರಣಹೋಮ ನಡೆಸಿದನೆನ್ನಲಾದ ವ್ಯಕ್ತಿಯ ಪತ್ನಿಗೆ ಈ ದಾಳಿಯ ಬಗ್ಗೆ ಗೊತ್ತಿತ್ತು ಹಾಗೂ ಆಕೆಯ ವಿರುದ್ಧ ಪ್ರಕರಣಕ್ಕೆ ಸಂಬಂಧಿಸಿ ಶೀಘ್ರವೇ ಮೊಕದ್ದಮೆ ದಾಖಲಿಸಬಹುದಾಗಿದೆ ಎಂದು ಕಾನೂನು ಅನುಷ್ಠಾನ ಸಂಸ್ಥೆಯ ಮೂಲವೊಂದು ಮಂಗಳವಾರ ತಿಳಿಸಿದೆ.
ಫೆಡರಲ್ ನ್ಯಾಯ ಮಂಡಳಿಯೊಂದನ್ನು ರಚಿಸಲಾಗಿದೆ ಹಾಗೂ ಶಂಕಿತ ಬಂದೂಕುಧಾರಿ ಉಮರ್ ಮತೀನ್‌ನ ಪತ್ನಿ ನೂರ್ ಸಲ್ಮಾನ್ ವಿರುದ್ಧ ಶೀಘ್ರವೇ ದೋಷಾರೋಪ ಹೊರಿಸಬಹುದಾಗಿದೆ ಎಂದು ಮೂಲವು ರಾಯ್ಟರ್ಸ್‌ಗೆ ಹೇಳಿದೆ.
‘‘ಏನು ನಡೆಯುತ್ತಿದೆ ಎಂಬುದರ ಬಗ್ಗೆ ಆರೋಪಿಯ ಪತ್ನಿಗೆ ಗೊತ್ತಿರುವಂತೆ ಅನಿಸುತ್ತಿದೆ’’ ಎಂದು ಸೆನೆಟ್ ಗುಪ್ತಚರ ಸಮಿತಿಯ ಸದಸ್ಯ ಸೆನೆಟರ್ ಆ್ಯಂಗಸ್ ಕಿಂಗ್ ಹೇಳಿದರು.
‘‘ಆಕೆಗೆ ಖಂಡಿತವಾಗಿಯೂ ತನ್ನ ಗಂಡನ ಯೋಜನೆಯ ಬಗ್ಗೆ ತಿಳಿದಿತ್ತು. ಆಕೆ ಈಗ ಸಹಕಾರ ನೀಡುತ್ತಿರುವಂತೆ ಅನಿಸುತ್ತಿದೆ. ಆಕೆ ನಮಗೆ ಮಹತ್ವದ ಮಾಹಿತಿಯನ್ನು ಒದಗಿಸಬಲ್ಲಳು’’ ಎಂದು ಕಿಂಗ್ ಸಿಎನ್‌ಎನ್‌ಗೆ ಹೇಳಿದರು.
ಪಲ್ಸ್ ಎಂಬ ಹೆಸರಿನ ನೈಟ್ ಕ್ಲಬ್‌ನಲ್ಲಿ ರವಿವಾರ ಮೂರು ಗಂಟೆಗಳ ಕಾಲ ಹತ್ಯಾಕಾಂಡ ನಡೆಸಿದ ಮತೀನ್‌ನನ್ನು ಪೊಲೀಸರು ಬಳಿಕ ಗುಂಡು ಹಾರಿಸಿ ಕೊಂದರು.
29 ವರ್ಷದ ಮತೀನ್ ಅಮೆರಿಕದ ಪ್ರಜೆಯಾಗಿದ್ದಾನೆ. ಆತನು ಅಫ್ಘಾನಿಸ್ತಾನದ ವಲಸಿಗ ದಂಪತಿಗೆ ನ್ಯೂಯಾರ್ಕ್‌ನಲ್ಲಿ ಹುಟ್ಟಿದ್ದನು.
ಉಮರ್‌ನನ್ನು ಪ್ರೀತಿಸಿ ಮದುವೆಯಾದಳು
ಒರ್ಲಾಂಡೊ ಹಂತಕ ಉಮರ್ ಮತೀನ್‌ನ ಪತ್ನಿ ಫೆಲೆಸ್ತೀನ್ ಮೂಲದ ಕ್ಯಾಲಿಫೋರ್ನಿಯ ನಿವಾಸಿಯಾಗಿದ್ದಾಳೆ.
30 ವರ್ಷದ ನೂರ್ ಝಾಹಿ ಸಲ್ಮಾನ್ ಅರೇಂಜ್ಡ್ ಮದುವೆಯಿಂದ ಹೊರಬಂದು ಉಮರ್‌ನ ಪ್ರೇಮಪಾಶದಲ್ಲಿ ಬಿದ್ದಿದ್ದರು.
ಕ್ಯಾಲಿಫೋರ್ನಿಯದ ಸಣ್ಣ ಉಪನಗರ ರೋಡಿಯೊದಲ್ಲಿ ಬೆಳೆದ ಆಕೆಗೆ ಭದ್ರತಾ ಸಿಬ್ಬಂದಿ, ಬಾಡಿ ಬಿಲ್ಡರ್ ಮತ್ತು ಶ್ರದ್ಧಾಳು ಮುಸ್ಲಿಮ್ ಆಗಿದ್ದ ಉಮರ್ ಜೊತೆಗೆ ಆನ್‌ಲೈನ್‌ನಲ್ಲಿ ಪ್ರೇಮ ಉಂಟಾಯಿತು ಹಾಗೂ ಅವರು 2011 ಸೆಪ್ಟಂಬರ್ 29ರಂದು ಮದುವೆಯಾದರು.
ದಂಪತಿಗೆ 3 ವರ್ಷದ ಓರ್ವ ಮಗನಿದ್ದಾನೆ.







