ಸಾಧ್ವಿ ಪ್ರಾಚಿಯ ವಿರುದ್ಧ ಎಫ್‌ಐಆರ್
‘ಮುಸ್ಲಿಂ ಮುಕ್ತ ಭಾರತ’ ಹೇಳಿಕೆ
ಉನ್ನಾವೊ(ಉ.ಪ್ರ.) ಜೂ.15: ಕೋಮು ಭಾವನೆಯನ್ನು ಪ್ರಚೋದಿಸಿದ ಆರೋಪದ ಮೇಲೆ ವಿಎಚ್‌ಪಿಯ ವಿವಾದಿತ ನಾಯಕಿ ಸಾಧ್ವಿ ಪ್ರಾಚಿ ವಿರುದ್ಧ ಎಫ್‌ಐಆರ್ ಒಂದನ್ನು ದಾಖಲಿಸಲಾಗಿದೆಯೆಂದು ಪೊಲೀಸರಿಂದು ತಿಳಿಸಿದ್ದಾರೆ.
ಬಹುಜನ ಮುಕ್ತಿ ಮೋರ್ಚಾದ ಸಂದೀಪ್‌ಕುಮಾರ್ ಎಂಬವರ ದೂರನ್ನು ಆಧರಿಸಿ ಸಾಧ್ವಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಅವರು ಇತ್ತೀಚೆಗೆ ಉತ್ತರಾಖಂಡದಲ್ಲಿ ನೀಡಿದ್ದ ಹೇಳಿಕೆಯೊಂದರಲ್ಲಿ ‘ಮುಸ್ಲಿಂ ಮುಕ್ತ ರಾಷ್ಟ್ರ’ವನ್ನು ಪ್ರತಿಪಾದಿಸಿದ್ದರು. ಇದರಿಂದ ಮುಸ್ಲಿಮರ ಭಾವನೆಗಳಿಗೆ ಧಕ್ಕೆಯಾಗಿದೆಯೆಂದು ದೂರುದಾರರು ಆರೋಪಿಸಿದ್ದಾರೆಂದು ಅವರು ಹೇಳಿದ್ದಾರೆ.
ಐಪಿಸಿಯ ಸೆ.153ಎ(ಮತೀಯ ನೆಲೆಯಲ್ಲಿ ವಿವಿಧ ಗುಂಪುಗಳ ನಡುವೆ ವೈರಕ್ಕೆ ಪ್ರಚೋ ದನೆ), 153 ಬಿ(ರಾಷ್ಟ್ರೀಯ ಸಮಗ್ರತೆಗೆ ಧಕ್ಕೆಯಾಗುವಂತಹ ಹೇಳಿಕೆಗಳು) ಅನ್ವಯ ಎಫ್‌ಐಆರ್ ದಾಖಲಿಸಲಾಗಿದೆಯೆಂದು ಉನ್ನಾವೊದ ಎಸ್‌ಎಚ್‌ಒ, ಸಂಜಯ ಪಾಂಡೆ ತಿಳಿಸಿದ್ದಾರೆ.
ಕಾಂಗ್ರೆಸ್ ಮುಕ್ತ ಭಾರತ ಅಭಿಯಾನ ಈಗಾಗಲೇ ಯಶಸ್ವಿಯಾಗಿದೆ. ಇನ್ನೀಗ ಮುಸ್ಲಿಂ ಮುಕ್ತ ಭಾರತ ಅಭಿಯಾನವನ್ನು ಆರಂಭಿಸಬೇಕಿದೆ. ಆ ಬಗ್ಗೆ ತಾವು ಕೆಲಸ ಮಾಡುತ್ತಿದ್ದೇವೆಂದು ರೂರ್ಕಿಯಲ್ಲಿ ಪ್ರಾಚಿ ಹೇಳಿದ್ದರು.





