ಕೇರಳ: ಕೋರ್ಟ್ ಆವರಣದಲ್ಲಿ ಸ್ಫೋಟ
ಒಬ್ಬನಿಗೆ ಗಾಯ
ಕೊಲ್ಲಂ(ಕೇರಳ), ಜೂ.15: ಇಲ್ಲಿನ ಕಲೆಕ್ಟರೇಟ್ ಹಾಗೂ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ಇಂದು ಬಳಕೆಯಲ್ಲಿಲ್ಲದ ಜೀಪೊಂದರಡಿ ಇರಿಸಲಾಗಿದ್ದ ಶಂಕಿತ ಸ್ಥಳೀಯ ನಿರ್ಮಿತ ‘ಸ್ಟೀಲ್ ಬಾಂಬ್’ ಸ್ಫೋಟದಿಂದ 61ರ ಹರೆಯದ ವ್ಯಕ್ತಿಯೊಬ್ಬ ಗಾಯಗೊಂಡಿದ್ದಾರೆ.
ಸಮೀಪದ ಕುಂದರ ನಿವಾಸಿಯಾಗಿರುವ ಸಾಬು ಎಂಬವರು ರಾಜ್ಯ ಕಾರ್ಮಿಕ ಇಲಾಖೆಗೆ ಸೇರಿದ ಜೀಪಿನ ಬಳಿ ನಿಂತಿದ್ದಾಗ ಈ ಸ್ಫೋಟ ಸಂಭವಿಸಿತೆಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣವೊಂದರ ಸಂಬಂಧ ಅವರು ನ್ಯಾಯಾಲಯಕ್ಕೆ ಬಂದಿದ್ದರು.
ನಿಲ್ಲಿಸಿದ್ದ ವಾಹನದ ಅಡಿಯಲ್ಲಿರಿಸಲಾಗಿದ್ದ ‘ಸ್ಟೀಲ್ ಬಾಂಬ್’ನಿಂದ (ಸ್ಟೀಲ್ ಪೈಪ್‌ನಲ್ಲಿ ಸ್ಫೋಟಕ ತುಂಬಿಸಿರುವುದು) ಈ ಸ್ಫೋಟ ಸಂಭವಿಸಿದೆಯೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸ್ಫೋಟದಿಂದಾಗಿ ವಾಹನವು ಭಾಗಶಃ ಹಾನಿಗೊಂಡಿದೆಯೆಂದು ಪೊಲೀಸರು ಹೇಳಿದ್ದಾರೆ.
ಸಾಬು ಅವರ ಕಣ್ಣು ಹಾಗೂ ಮೂಗಿಗೆ ಗಾಯಗಳಾಗಿವೆ. ಅವರ ಸ್ಥಿತಿ ಗಂಭೀರವಾಗಿಲ್ಲ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಭೀತಿ ಹುಟ್ಟಿಸುವ ಸಲುವಾಗಿ ಸ್ಫೋಟಕವನ್ನು ಉದ್ದೇಶ ಪೂರ್ವಕವಾಗಿಯೇ ಜೀಪಿನಡಿ ಇರಿಸಲಾಗಿತ್ತೆಂದು ಪೊಲೀಸರು ಶಂಕಿಸಿದ್ದಾರೆ.
ಬಾಂಬ್ ದಳ ಹಾಗೂ ಇತರ ವಿಧಿವಿಜ್ಞಾನ ಅಧಿಕಾರಿಗಳು ಸ್ಥಳದಲ್ಲಿದ್ದಾರೆ. ಜೀಪಿನಿಂದ ಜಿಲೆಟಿನ್ ಕಡ್ಡಿಗಳು, 17 ಬ್ಯಾಟರಿಗಳು ಹಾಗೂ ಫ್ಯೂಸ್ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದೇವೆಂದು ಪೊಲೀಸರು ತಿಳಿಸಿದ್ದಾರೆ.





