ಭತ್ತ, ಮುಸುಕಿನ ಜೋಳದ ಬಿತ್ತನೆ ಬೀಜ ವಿತರಣೆಗೆ ಡಿಸಿ ಸೂಚನೆ
ಕಂದಾಯಾಧಿಕಾರಿಗಳ ಸಭೆೆ

ಮಡಿಕೇರಿ, ಜೂ.15: ಮುಂಗಾರು ಮಳೆ ಆರಂಭವಾಗಿದ್ದು, ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುತ್ತಿದೆ. ಆದ್ದರಿಂದ ಮುಂಗಾರು ಹಂಗಾಮಿಗೆ ಬೇಕಿರುವ ಭತ್ತ ಹಾಗೂ ಮುಸುಕಿನ ಜೋಳದ ಬಿತ್ತನೆ ಬೀಜಗಳನ್ನು ಸಮರ್ಪಕವಾಗಿ ವಿತರಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಸೂಚನೆ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಕಂದಾಯಾಧಿಕಾರಿಗಳ ಸಭೆೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಮಪ್ಪ ಮಾಹಿತಿ ನೀಡಿ, ಜಿಲ್ಲೆಯಲ್ಲಿ 31 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಹಾಗೂ 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡುವ ಗುರಿ ಹೊಂದಲಾಗಿದ್ದು, ಅಗತ್ಯ ಬಿತ್ತನೆ ಬೀಜ ದಾಸ್ತಾನು ಮಾಡಿ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಇಲ್ಲ. ಬೇಡಿಕೆಯಷ್ಟು ರಸಗೊಬ್ಬರವನ್ನು ದಾಸ್ತಾನು ಮಾಡಲಾಗಿದ್ದು, ಸಹಕಾರಿ ಸಂಘಗಳು ಹಾಗೂ ಖಾಸಗಿಯಾಗಿ ರಸಗೊಬ್ಬರ ಪಡೆಯಬಹುದಾಗಿದೆ. ಡಿಎಪಿ, ಎಂಒಪಿ, ಯೂರಿಯಾ, ಎನ್‌ಪಿಕೆ, ಎಸ್‌ಎಸ್‌ಪಿ ಒಟ್ಟು 28,930 ಟನ್‌ನಷ್ಟು ದಾಸ್ತಾನು ಮಾಡಿ ಸರಬರಾಜು ಆಗಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕರು ಮಾಹಿತಿ ನೀಡಿದರು.
ತೋಟಗಾರಿಕೆ ಇಲಾಖೆ ಅಧಿಕಾರಿ ಮಾತನಾಡಿ, ಜಿಲ್ಲೆಯಲ್ಲಿ 539 ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕಾ ಬೆಳೆ ಬೆಳೆಯಲಾಗುತ್ತದೆ. ಇದರಲ್ಲಿ ಮಾವು, ಸಪೋಟ, ತೆಂಗು, ಕಾಳುಮೆಣಸು ಬೆಳೆಯಲಾಗುತ್ತದೆ ಎಂದು ಅವರು ತಿಳಿಸಿದರು. ಜಿಲ್ಲೆಯಲ್ಲಿ 1.86ಲಕ್ಷ ಜಾನುವಾರುಗಳಿದ್ದು, ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುತ್ತಿರುವುದರಿಂದ ಜಾನುವಾರುಗಳ ಮೇವಿಗೆ ತೊಂದರೆಯಿಲ್ಲ ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕಡಾ.ನಾಗರಾಜು ಹೇಳಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ ಸಾಧಾರಣವಾಗಿ ಮಳೆಯಾಗುತ್ತಿದೆ. ಆದರೂ ಕುಡಿಯುವ ನೀರು ಸಮಸ್ಯೆ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು. ಸಮಸ್ಯೆಗಳಿದ್ದಲ್ಲಿ ಪರಿಹರಿಸುವಂತೆ ಸಂಬಂಧಪಟ್ಟ ಇಂಜಿನಿಯರ್‌ಗಳಿಗೆ ಸೂಚನೆ ನೀಡಿದರು. ಸರಕಾರಿ ಶಾಲೆಗಳಿಗೆ ಸಂಬಂಧಿಸಿದಂತೆ ಇದುವರೆಗೆ ಆರ್‌ಟಿಸಿ ಆಗದಿರುವ ಶಾಲೆಗಳನ್ನು ಗುರುತಿಸಿ ಅವುಗಳಿಗೆ ಪ್ರಥಮ ಆದ್ಯತೆಯಲ್ಲಿ ಆರ್‌ಟಿಸಿ ನೀಡುವಂತೆ ಅವರು ನಿರ್ದೇಶನ ನೀಡಿದರು. ಜಿಲ್ಲೆಯಲ್ಲಿ ಕಳೆದ ಎಪ್ರಿಲ್, ಮೇ ತಿಂಗಳಲ್ಲಿ ಮಳೆಯಾಗದೆ ಕಾಫಿ ಬೆಳೆ ನಷ್ಟ ಉಂಟಾಗಿದ್ದಲ್ಲಿ ನಿಖರ ಮಾಹಿತಿ ಸಂಗ್ರಹಿಸುವಂತೆ ಕಾಫಿ ಮಂಡಳಿ ಉಪ ನಿರ್ದೇಶರಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್ ಹೇಳಿದರು.
ಬೆಳೆ ಹಾನಿ, ಕುಡಿಯುವ ನೀರು ಮತ್ತಿತರ ಸಂಬಂಧ ಆದ್ಯತೆ ಮೇಲೆ ಕಾರ್ಯನಿರ್ವಹಿಸಬೇಕಿದೆ. ಬೆಳೆ ಹಾನಿಗೆ ಪರಿಹಾರ ವಿತರಿಸುವುದು, ಕುಡಿಯುವ ನೀರು ಸಮಸ್ಯೆ ಇದ್ದಲ್ಲಿ ಬಗೆಹರಿಸುವುದು ಮತ್ತಿತರ ಸಂಬಂಧ ಆದ್ಯತೆ ಮೇಲೆ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಜಿಲ್ಲೆಯ ಹಲವು ಶಾಲೆಗಳಲ್ಲಿ ಶೌಚಾಲಯವಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದು, ಕಟ್ಟಡ ನಿರ್ಮಿಸುವಾಗ ಶೌಚಾಲಯ ನಿರ್ಮಿಸದಿದ್ದಲ್ಲಿ ಹೇಗೆ ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದರು. ಜಿಲ್ಲೆಯಲ್ಲಿ ಜೂ.10ರಿಂದ ಮರಳು ಸಾಗಾಣಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಆದರೂ ಅಕ್ರಮ ಮರಳು ಸಾಗಾಣಿಕೆ ಬಗ್ಗೆ ವರದಿಗಳು ಬರುತ್ತವೆ. ಈ ಸಂಬಂಧ ಏನು ಕ್ರಮ ಕೈಗೊಂಡಿದ್ದೀರಿ ಎಂದು ಜಿಲ್ಲಾಧಿಕಾರಿ ಪ್ರಶ್ನಿಸಿದರು. ಇದುವರೆಗೆ ಅಕ್ರಮ ಮರಳು ಸಾಗಾಣಿಕೆ ಸಂಬಂಧಿಸಿದಂತೆ ಎಷ್ಟು ಪ್ರಕರಣ ದಾಖಲಿಸಲಾಗಿದೆ ಎಂದು ಮಾಹಿತಿ ಒದಗಿಸುವಂತೆ ಅವರು ಸೂಚನೆ ನೀಡಿದರು.
ಈ ಸಂಬಂಧ ಮಾಹಿತಿ ನೀಡಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಮಹೇಶ್ ಅವರು ಬಾಳೆಲೆ ಮತ್ತು ಶನಿವಾರಸಂತೆ ವ್ಯಾಪ್ತಿಯಲ್ಲಿ ದೂರು ದಾಖಲಿಸಲಾಗಿದೆ ಎಂದರು. ಉಪ ವಿಭಾಗಾಧಿಕಾರಿ ಡಾ.ನಂಜುಂಡೇಗೌಡ, ಕಾಫಿ ಮಂಡಳಿಯ ಉಪ ನಿರ್ದೇಶಕ ರಾಮಗೌಡರ್, ಡಿಡಿಪಿಐ ಜಿ.ಆರ್.ಬಸವರಾಜು, ಜಿಪಂ ಇಂಜಿನಿಯರ್‌ಗಳಾದ ಶಶಿಧರ, ರೆಡ್ಡಿ ಮತ್ತಿತರರು ಮಾಹಿತಿ ನೀಡಿದರು. ತಹಶೀಲ್ದಾರ್ ಶಿವಪ್ಪ, ಕುಂಞಮ್ಮ, ಮಹದೇವಸ್ವಾಮಿ, ಡಿಸಿ ಕಚೇರಿಯ ಪ್ರವೀಣ್ ಕುಮಾರ್, ಪ್ರಕಾಶ್, ಭಾಗ್ಯಲಕ್ಷ್ಮೀ, ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.







