ಸರಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಕಲಿಕೆಗೆ ಪ್ರೋತ್ಸಾಹ ಅಗತ್ಯ:ಮೀನಾಕ್ಷಿ ಶಾಂತಿಗೋಡು
ಕಾವು ಪ್ರಾಥಮಿಕ ಶಾಲೆಯಲ್ಲಿ ಎಲ್‌ಕೆಜಿ ತರಗತಿ ಉದ್ಘಾಟನೆ

ಪುತ್ತೂರು, ಜೂ.15: ವಿದ್ಯಾರ್ಥಿಗಳ ಕೊರತೆಯ ಕಾರಣದಿಂದ ಕೆಲವೊಂದು ಕಡೆಗಳಲ್ಲಿ ಸರಕಾರಿ ಶಾಲೆಗಳು ಮುಚ್ಚುವ ಭೀತಿಯಲ್ಲಿವೆ, ಇಂತಹ ಶಾಲೆಗಳನ್ನು ಉಳಿಸಬೇಕಾದಲ್ಲಿ ಶಾಲೆಗಳಲ್ಲಿ ಆಧುನಿಕ ಶಿಕ್ಷಣ ಕಲಿಕೆ ಜೊತೆಗೆ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳನ್ನು ಪ್ರಾರಂಭಿಸುವುದು ಅಗತ್ಯವಾಗಿದೆ ಎಂದು ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು.
ಅವರು ಶತಮಾನ ಕಂಡ ಕಾವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ನೂತನವಾಗಿ ಆರಂಭಿಸಲಾದ ಎಲ್‌ಕೆಜಿ ಮತ್ತು ಯುಕೆಜಿ ತರಗತಿಯನ್ನು ಉದ್ಘಾಟಿಸಿ ಮಾತನಾಡಿದರು.
ಖಾಸಗಿ ಶಾಲೆಗಳ ಭರಾಟೆಯ ನಡುವೆ ಸಿಲುಕಿ ಸರಕಾರಿ ಶಾಲೆಗಳು ಅಸ್ತಿತ್ವವನ್ನು ಕಳೆದುಕೊಳ್ಳುವಂತಾಗಬಾರದು. ಪ್ರತೀ ಮಗುವಿಗೂ ಪ್ರಾಥಮಿಕ ಹಂತದಲ್ಲೇ ಇಂಗ್ಲೀಷ್ ಕಲಿಕೆ ಕಡ್ಡಾಯವಾಗಿದೆ. ಕನ್ನಡ ಮಾಧ್ಯಮದ ವಿದ್ಯಾರ್ಥಿಗಳೂ ಇಂಗ್ಲೀಷ್ ಕಲಿಕೆಯ ಕಡೆ ಹೆಚ್ಚಿನ ಗಮನಹರಿಸಬೇಕು ಎಂದು ಹೇಳಿದರು.
ಪುತ್ತೂರು ತಾಪಂ ಅಧ್ಯಕ್ಷೆ ಭವಾನಿ ಚಿದಾನಂದ ಅಧ್ಯಕ್ಷತೆ ವಹಿಸಿದ್ದರು. ಬಳಿಕ ಮಾತನಾಡಿದ ಅವರು, ಕಾವು ಶಾಲೆ ಜಿಲ್ಲೆಗೆ ಮಾದರಿಯಾಗಿದೆ. ಶತಮಾನ ಕಂಡ ಶಾಲೆಯನ್ನು ಉಳಿಸುವ ಮತ್ತು ಗ್ರಾಮೀಣ ಮಕ್ಕಳಿಗೂ ಇಂಗ್ಲೀಷ್ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಸರಕಾರಿ ಶಾಲೆಯಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಯನ್ನು ಪ್ರಾರಂಭಿಸಿರುವುದು ಅಭಿನಂದನಾರ್ಹವಾಗಿದೆ. ಹಳೆ ವಿದ್ಯಾರ್ಥಿಯಾದ ಕಾವು ಹೇಮನಾಥ ಶೆಟ್ಟಿಯವರು ಶಾಲೆಯನ್ನು ದತ್ತು ತೆಗೆದುಕೊಳ್ಳುವ ಮೂಲಕ ಇಲ್ಲಿನ ಅಭಿವೃದ್ದಿಗೆ ಕಾರಣರಾಗಿದ್ದಾರೆ. ಪ್ರತಿಯೊಂದು ಗ್ರಾಮದಲ್ಲಿಯೂ ಈ ರೀತಿಯ ವ್ಯವಸ್ಥೆಗಳು ಜಾರಿಯಾದಲ್ಲಿ ಸರಕಾರಿ ಶಾಲೆಗಳನ್ನು ಉಳಿಸಿಕೊಳ್ಳಬಹುದಾಗಿದೆ ಎಂದು ಹೇಳಿದರು.
ತರಗತಿ ಪೀಠೋಪಕರಣಗಳನ್ನು ಜಿಪಂ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಒಳ್ಳೆಯ ಉದ್ದೇಶ ಇಟ್ಟುಕೊಂಡು ತರಗತಿಗಳನ್ನು ಪ್ರಾರಂಭ ಮಾಡಲಾಗಿದೆ. ಇದನ್ನು ಉಳಿಸಿಕೊಳ್ಳುವ ಜವಾಬ್ದಾರಿ ಇಲ್ಲಿನ ಪೋಷಕರಿಗಿದೆ. ಶಾಲೆಯಲ್ಲಿ ಕಲಿಕೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಹೇಳಿ ದಾನಿಗಳಿಂದ ಸಹಕಾರ ಕೋರಿದರು.
ವೇದಿಕೆಯಲ್ಲಿ ತಾಪಂ ಸದಸ್ಯ ರಾಮ ಪಾಂಬಾರು, ಅರಿಯಡ್ಕ ಗ್ರಾಪಂ ಉಪಾಧ್ಯಕ್ಷ ಲೋಕೇಶ್ ಚಾಕೊಟೆ, ಒಳಮೊಗ್ರು ತಾಪಂ ಸದಸ್ಯ ಹರೀಶ್ ಬಿಜತ್ರೆ, ಮಾಡನ್ನೂರು ಮಸೀದಿ ಅಧ್ಯಕ್ಷ ಮುಹಮ್ಮದ್, ಮುಳಿಯ ಪ್ರಾಪರ್ಟಿಸ್‌ನ ಕೃಷ್ಣನಾರಾಯಣ ಮುಳಿಯ, ಅರಿಯಡ್ಕ ಗ್ರಾಪಂ ಸದಸ್ಯ ದಿವ್ಯನಾಥ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಮುಖ್ಯಗುರು ಹುಕ್ರಪ್ಪ ನಾಯ್ಕಿ ಸ್ವಾಗತಿಸಿ, ವಂದಿಸಿದರು.







