ತಾಲೂಕು ಪಂಚಾಯತ್ ಸದಸ್ಯೆಯಿಂದ ದೌರ್ಜನ್ಯ: ಆರೋಪ

ಸಾಗರ, ಜೂ.15: ತಾಲೂಕು ಪಂಚಾಯತ್ ಸದಸ್ಯೆ ಹಾಗೂ ಪ್ರಭಾವಿ ಕಾಂಗ್ರೆಸ್ ಮುಖಂಡ ಜ್ಯೋತಿ ಮುರಳೀಧರ್ ನಮ್ಮ ಕುಟುಂಬದ ಮೇಲೆ ಅನಗತ್ಯ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಉಳ್ಳೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ನಾಗರಾಜ ಗೌಡ ದೂರಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿ ತಾಲೂಕು ಪಂಚಾಯತ್ ಸದಸ್ಯೆ ಜ್ಯೋತಿ ಮುರಳೀಧರ್, ಅವರ ಸಂಬಂಧಿಕರಾದ ಜನಾ ರ್ದನ್ ಮತ್ತು ರುದ್ರೇಶ್ ಎಂಬವರು ನಮ್ಮ ಸ್ವಾಧೀನದಲ್ಲಿರುವ ಜಾಗವನ್ನು ಕಬಳಿಸುವ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು. ಹೊಸೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಗುಂದ ಗ್ರಾಮದ ಸರ್ವೇ ನಂ. 57ರಲ್ಲಿ ನಮ್ಮ ತಾಯಿ ಎಚ್.ಎಸ್.ಇಂದ್ರಮ್ಮ ಅವರಿಗೆ ಸೇರಿದ 2.19 ಎಕರೆ ಜಾಗವಿದೆ. 1964ರಲ್ಲಿ ಈ ಜಾಗ ನಮ್ಮ ಕುಟುಂಬದವರ ಹೆಸರಿಗೆ ದರಕಾಸ್ತಿನಲ್ಲಿ ಮಂಜೂರಾಗಿದೆ. ಹೇಗಾ ದರೂ ಮಾಡಿ ಜಾಗವನ್ನು ಕಬಳಿಸಬೇಕು ಎನ್ನುವ ಪ್ರಯತ್ನವನ್ನು ಜ್ಯೋತಿ ಮುರಳೀಧರ್ ಮತ್ತು ಕುಟುಂಬದವರು ಮಾಡುತ್ತಿದ್ದಾರೆ. ಈಗಾಗಲೇ ನಮ್ಮ ಸ್ವಾಧೀನದಲ್ಲಿರುವ ಒಂದು ಎಕರೆಗೂ ಹೆಚ್ಚಿನ ಜಾಗವನ್ನು ಒತ್ತುವರಿ ಮಾಡಿ ಕೊಂಡಿದ್ದಾರೆ ಎಂದರು. ಜೂ.13ರಂದು ನಮ್ಮ ತಾಯಿ ಇಂದ್ರಮ್ಮ ಹಾಗೂ ಸಹೋದರ ಶಿವಾ ನಂದ ಅವರು ತಮ್ಮ ಸ್ವಾಧೀನದಲ್ಲಿರುವ ಜಾಗದಲ್ಲಿ ಕೆಲಸ ಮಾಡುತ್ತಿದ್ದಾಗ ಜ್ಯೋತಿ, ಜನಾರ್ದನ್ ಮತ್ತು ರುದ್ರೇಶ್ ಎಂಬವರು ಏಕಾಏಕಿ ಹಲ್ಲೆ ಮಾಡಿದ್ದಾರೆ. ಜಾಗವನ್ನು ಬಿಟ್ಟು ಹೋಗದಿದ್ದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದಾರೆ. ನಮ್ಮ ಹಕ್ಕಿನಲ್ಲಿರುವ ಜಮೀನಿನಲ್ಲಿ ಕೃಷಿ ಮಾಡುವ ಹಕ್ಕನ್ನು ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
ಹಲ್ಲೆಗೆ ಒಳಗಾದ ಇಂದ್ರಮ್ಮ ಹಾಗೂ ಶಿವಾನಂದ ಅವರು ಸಾಗರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಒಳರೋಗಿಗಳಾಗಿ ದಾಖಲು ಮಾಡಲು ಕರ್ತವ್ಯನಿರತ ವೈದ್ಯ ಡಾ.ಪರಪ್ಪ ನಿರಾಕರಿಸಿದ್ದಾರೆ. ಇದರ ಹಿಂದೆ ಜ್ಯೋತಿ ಅವರು ಬಳಸಿದ ರಾಜಕೀಯ ಪ್ರಭಾವ ಇದೆ. ನಂತರ ನಾವು ವಕೀಲರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿ, ಜ್ಯೋತಿ, ಜನಾರ್ದನ್ ಹಾಗೂ ರುದ್ರೇಶ್ ಅವರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದೇವೆ ಎಂದು ತಿಳಿಸಿದರು.
ವಿಚಿತ್ರವೆಂದರೆ ನಮ್ಮ ತಾಯಿ ಹಾಗೂ ಸಹೋದರನ ಮೇಲೆ ಹಲ್ಲೆ ನಡೆದಾಗ ನಾನು ಸಾಗರ ನ್ಯಾಯಾಲಯದಲ್ಲಿ ಪ್ರಕರಣವೊಂದರ ಕುರಿತು ಹಾಜರಾಗಿದ್ದರೂ, ನನ್ನನ್ನು ಸೇರಿ ಠಾಣೆ ಯಲ್ಲಿ ದೂರು ದಾಖಲಿಸಲಾಗಿದೆ. ದೂರಿನಲ್ಲಿ ಜ್ಯೋತಿ ಅವರ ಗಂಡ ಮುರಳೀಧರ್ ಅವರ ಕುಮ್ಮಕ್ಕಿನಿಂದ ನಾವು ಹಲ್ಲೆ ನಡೆಸಿದ್ದೇವೆ ಎಂದು ತಿಳಿಸಲಾಗಿದೆ. ಜ್ಯೋತಿ ಅವರು ತಮ್ಮ ಪತಿ ಮುರ ಳೀಧರ್ ಅವರ ಮೇಲಿನ ವೈಯಕ್ತಿಕ ದ್ವೇಷ ದಿಂದ ಸುಳ್ಳು ದೂರನ್ನು, ನಮ್ಮ ಮೇಲೆ ಹಾಗೂ ಮುರಳೀಧರ್ ಅವರ ಮೇಲೆ ನೀಡಿದ್ದಾರೆ ಎಂದರು. ನಮ್ಮ ಮೇಲೆ ಸುಳ್ಳು ದೂರು ನೀಡಿದವರ ವಿರುದ್ಧ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ನಮ್ಮ ಜಮೀನಿನಲ್ಲಿ ಬೆಳೆ ತೆಗೆಯಲು ಹೆದರುವ ಸ್ಥಿತಿ ನಿರ್ಮಾಣ ವಾಗಿದ್ದು, ಪೊಲೀಸರು ರಕ್ಷಣೆ ಕೊಡಬೇಕು. ಹಲ್ಲೆ ನಡೆಸಿದವರನ್ನು ಬಂಧಿಸಿ ಕಾನೂನುಕ್ರಮ ಕೈಗೊಳ್ಳದೆ ಇದ್ದಲ್ಲಿ ನಮ್ಮ ಕುಟುಂಬ ಗ್ರಾಮಾಂತರ ಠಾಣೆ ಎದುರು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.ಸುದ್ದಿಗೋಷ್ಠಿಯಲ್ಲಿ ಎಚ್.ಎಸ್.ಇಂದ್ರಮ್ಮ, ಶಿವಾನಂದ ಉಪಸ್ಥಿತರಿದ್ದರು.







