ಸರಕಾರಿ ಶಾಲೆಗಳ ಸೌಲಭ್ಯಗಳಿಗೆ ಅಭಿವೃದ್ಧಿ ಸಮಿತಿಯ ಸಭೆ: ಮಲ್ಲಿಕಾರ್ಜುನ ಹಕ್ರೆ
.jpg)
ಸಾಗರ, ಜೂ.15: ಶಿಕ್ಷಕರ ಸಮಸ್ಯೆಗಳನ್ನು ತಿಳಿಯಲು ಹಾಗೂ ಸರಕಾರಿ ಶಾಲೆಗಳಿಗೆ ಅಗತ್ಯವಾದ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಶೀಘ್ರದಲ್ಲಿಯೇ ಎಲ್ಲ ಹೋಬಳಿಗಳಲ್ಲಿ ಮುಖ್ಯಶಿಕ್ಷಕರು, ಶಿಕ್ಷಕರು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷರು, ಸದಸ್ಯರ ಸಭೆ ಕರೆದು ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ ಎಂದು ತಾಲೂಕು ಪಂಚಾಯತ್ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ ತಿಳಿಸಿದರು.
ತಾಲೂಕು ಪಂಚಾಯತ್‌ನಲ್ಲಿ ಬುಧವಾರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ನೀಡಲಾದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಎರಡು ಮೂರು ದಿನದಲ್ಲಿ ಸಮಾಲೋಚನಾ ಸಭೆ ಆಯೋಜಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು. ಸರಕಾರಿ ಶಾಲೆಯಲ್ಲಿಯೇ ಪೂರ್ವಪ್ರಾಥಮಿಕ ಶಾಲೆ ಪ್ರಾರಂಭಿಸುವ ನಮ್ಮ ಉದ್ದೇಶ ಬಹುತೇಕ ಯಶಸ್ಸು ಕಂಡಿದೆ. ತಾಲೂಕಿನ ಆವಿನಹಳ್ಳಿ ಹೋಬಳಿಯ ಗೆಣಸಿನಕುಣಿ ಮಾದರಿಯಲ್ಲಿ ತಾಳಗುಪ್ಪ, ಹಂಸಗಾರು ಇನ್ನಿತರ ಕಡೆಗಳ ಸರಕಾರಿ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿಗಳನ್ನು ತೆರೆಯಲಾಗಿದೆ. ಜಿಲ್ಲೆಯ ಹೊಸನಗರದಲ್ಲೂ ಈ ಪ್ರಯತ್ನ ನಡೆದಿದೆ. ರಾಜ್ಯವ್ಯಾಪಿ ಗೆಣಸಿನಕುಣಿ ಮಾದರಿಯನ್ನು ಅನುಸರಿಸುವ ನಿಟ್ಟಿನಲ್ಲಿ ಶಿಕ್ಷಣ ಸಚಿವರು ಆಸಕ್ತಿ ವಹಿಸಿದ್ದಾರೆ ಎಂದರು.
ಮಕ್ಕಳ ಕೊರತೆಯಿಂದ ಸರಕಾರಿ ಶಾಲೆಗಳು ಮುಚ್ಚುವ ಸ್ಥಿತಿ ನಿರ್ಮಾಣವಾಗಿದೆ. ಪೋಷಕರು ಖಾಸಗಿ ಶಾಲೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ಇದನ್ನು ತಡೆಗಟ್ಟಲು ಸರಕಾರಿ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ತರಗತಿ ತೆರೆಯುವುದು ಅಗತ್ಯ. ಶಿಕ್ಷಕರ ಸಂಘ ಸಹ ಈ ಬಗ್ಗೆ ಗಮನ ಹರಿಸಬೇಕು. ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ನಿಗಾವಹಿಸಬೇಕು. ಶಾಲೆ ಬಿಟ್ಟ ಮಕ್ಕಳನ್ನು ಪೋಷಕರ ಮನವೊಲಿಸಿ ಪುನಃ ಶಾಲೆಗೆ ಕರೆತರುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು. ಸರಕಾರಿ ನೌಕರರ ಸಂಘದ ಸಾಗರ ಶಾಖೆ ಅಧ್ಯಕ್ಷ ಡಿ.ಗಣಪತಪ್ಪ, ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ಪ ಒ.ಕೆ.ಮಾತನಾಡಿದರು. ಸಂದರ್ಭದಲ್ಲಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಪರಶುರಾಮ್ ಅವರನ್ನು ಸನ್ಮಾನಿಸಲಾಯಿತು.
ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಂ. ಪಂಡಿತಾರಾಧ್ಯ, ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ಸುಶೀಲ ಹೆಗಡೆ, ಬಗರ್‌ಹುಕುಂ ಸಮಿತಿ ಸದಸ್ಯ ಎಸ್.ಲಿಂಗರಾಜ್ ಮತ್ತಿತರರು ಉಪಸ್ಥಿತರಿದ್ದರು.







