ಸೊರಬ: ರಂಗೇರಿದ ತಾಲೂಕು ಪಂಚಾಯತ್ ಚುನಾವಣೆ

ಸೊರಬ, ಜೂ.15: ಸೊರಬ ತಾಲೂಕು ಪಂಚಾಯತ್ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಮಂಗಳವಾರದ ವರೆಗೂ ಯಾವುದೇ ಉತ್ಸಾಹ ಕಾಣದೇ ಬುಧವಾರದಿಂದ ವಿವಿಧ ಪಕ್ಷ ಹಾಗೂ ಪಕ್ಷೇತರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಲು ತಾ ಮುಂದು ನಾ ಮುಂದು ಎಂಬಂತೆ ತಮ್ಮ ಬೆಂಬಲಿ ಗರೊಂದಿಗೆ ಶ್ರೀ ರಂಗನಾಥ ದೇವಾಲಯದ ಮುಂಭಾ ಗದಿಂದ ಮುಖ್ಯ ರಸ್ತೆಯಲ್ಲಿ ತಾಲೂಕು ಕಚೆೇರಿಗೆ ತೆರಳಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಕಳೆದ ತಾಪಂ ಚುನಾವಣೆಯಲ್ಲಿ 18 ಕ್ಷೇತ್ರಗಳಲ್ಲಿ ಮೂರು ಪಕ್ಷಗಳಾದ ಜೆಡಿಎಸ್, ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ತಲಾ 6 ಕ್ಷೇತ್ರಗಳನ್ನು ಪಡೆಯುವ ಮೂಲಕ ಸಮಬಲ ಸಾಧಿಸಿದ್ದವು. ಇತ್ತೀಚಿನ ಕೆಲ ತಿಂಗಳುಗಳ ಹಿಂದೆ ನಡೆದ ಜಿಪಂ ಚುನಾವಣೆಯಲ್ಲಿ 5 ಸ್ಥಾನಗಳಲ್ಲಿ 4 ಸ್ಥಾನಗಳನ್ನು ಜೆಡಿಎಸ್ ತನ್ನ ತೆಕ್ಕೆಗೆ ಪಡೆದು ವಿಜೃಂಭಿಸಿದರೆ, 1 ಸ್ಥಾನಕ್ಕೆ ಬಿಜೆಪಿ ತೃಪ್ತಿ ಪಟ್ಟರೆ, ಕಾಂಗ್ರೆಸ್ ಸಂಪೂರ್ಣ ನೆಲ ಕಚ್ಚಿ, ಮುಖಭಂಗ ಅನುಭವಿಸಿತ್ತು. ಮುಂಬರುವ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿರುವ ಈಗಿನ ತಾಪಂ ಚುನಾವಣೆ ಪ್ರಮುಖ ಮೂರು ಪಕ್ಷಗಳಿಗೂ ತಮ್ಮ ಪಕ್ಷದ ವರ್ಚಸ್ಸನ್ನು ಉಳಿಸಿಕೊಳ್ಳುವ ಹೋರಾಟ ಎಂದೇ ಬಿಂಬಿತವಾಗಿದೆ. ಹಾಲಿ ಜೆಡಿಎಸ್ ಶಾಸಕ ಮಧು ಬಂಗಾರಪ್ಪ ಜಾತಿವಾರು ಲೆಕ್ಕಾಚಾರವನ್ನು ಮುಂದಿಟ್ಟುಕೊಂಡು ಎಲ್ಲಾ ಸಮುದಾಯದವರಿಗೂ ಸಮಾನ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಅಭ್ಯರ್ಥಿಗಳ ಆಯ್ಕೆಯಲ್ಲಿ ರಾಜಕೀಯ ಚಾಣಾಕ್ಷತನ ತೋರುತ್ತಿದ್ದಾರೆ. ಇನ್ನೊಂದು ಕಡೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಪಕ್ಷವು ಅಭ್ಯರ್ಥಿಗಳ ಭೆೇಟೆಯಲ್ಲಿ ತೊಡಗಿದೆ.
ಮತ್ತೊಂದು ಕಡೆ ಬಿಜೆಪಿ ತನ್ನ ಅಭ್ಯರ್ಥಿಗಳ ಆಯ್ಕೆಯನ್ನು ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ. ಒಟ್ಟಾರೆಯಾಗಿ ಪ್ರತಿ ಚುನಾವಣೆಗಳಲ್ಲೂ ರಾಜ್ಯ ರಾಜಕಾರಣದಲ್ಲಿ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ತಾಲೂಕಿನ ರಾಜಕಾರಣವು ಮೂರು ಘಟಾನುಘಟಿ ನಾಯಕರ ಪೈಪೋಟಿಯ ನಡುವೆ ತಾಪಂ ಯಾರ ಮಡಿಲಿಗೆ ಬೀಳಲಿದೆ, ಮತದಾರ ಯಾರ ಕೈ ಹಿಡಿಯಲಿದ್ದಾನೆ ಎಂಬುದನ್ನು ಕಾದು ನೋಡಬೇಕಿದೆ. ತಾಲೂಕಿನ 19 ತಾಪಂ ಕ್ಷೇತ್ರಗಳಿಗೆ ಬುಧವಾರ ಸಂಜೆವರೆಗೆ ಜೆಡಿಎಸ್‌ನಿಂದ 8, ಕಾಂಗ್ರೆಸ್‌ನಿಂದ 3, ಪಕ್ಷೇತ ರರು 4 ಒಟ್ಟು 15 ಅಭ್ಯರ್ಥಿಗಳು ನಾಮ ಪತ್ರ ಸಲ್ಲಿಸಿದರೆ, ಬಿಜೆಪಿಯಿಂದ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
ಚುನಾವಣಾಧಿಕಾರಿಗಳಾಗಿ ತಹಶೀಲ್ದಾರ್ ಕವಿತಾ ಯೋಗಪ್ಪನವರ್, ಜಿಪಂ ಎಇಇ ಎನ್.ನಂಜುಂಡ ಸ್ವಾಮಿ ಸಹಾಯಕ ಚುನಾವಣಾಧಿ ಕಾರಿಗಳಾಗಿ ಸಂತೋಷ್ ಕುಮಾರ್ ಹಾಗೂ ಟಿ.ಅಂಬಾಜಿ ಕಾರ್ಯನಿರ್ವಹಿಸಿದರು.







