ಮೂಲಸೌಕರ್ಯಕೆ ಒತ್ತಾಯಿಸಿ ಮನವಿ

ಚಿಕ್ಕಮಗಳೂರು, ಜೂ.15: ಕುಡಿಯುವ ನೀರು, ಒಳಚರಂಡಿ, ಸ್ವಚ್ಛತಾ ಕಾರ್ಯ ಸಹಿತ ಮೂಲ ಸೌಕರ್ಯವನ್ನು ಕಲ್ಪಿಸಲು ಒತ್ತಾಯಿಸಿ ಕಲ್ಲುದೊಡ್ಡಿ ಶಾಂತಿನಗರದ ಶಿವಾಜಿ ಯುವಕ ಸಂಘದ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಬುಧವಾರ ಮನವಿ ಸಲ್ಲಿಸಿದರು.
ಶಾಂತಿ ನಗರ ಬಡಾವಣೆಯು ನಗರಸಭಾ ವ್ಯಾಪ್ತಿಗೊಳಪಟ್ಟು 20ವರ್ಷ ಕಳೆದಿವೆ. ಜನ ನಗರಸಭಾ ಸದಸ್ಯರು ಇಲ್ಲಿಂದ ಆಯ್ಕೆಯಾಗಿದ್ದಾರೆ. ಆದರೆ ಸ್ಥಳೀಯರ ಮೂಲ ಸಮಸ್ಯೆಗಳಾದ ಕುಡಿಯುವ ನೀರು, ಒಳ ಚರಂಡಿ ವ್ಯವಸ್ಥೆ, ರಸ್ತೆ, ಮೂಲಭೂತ ಸೌಕಯಗಳಿಲ್ಲದೇ ಗ್ರಾಮ ವಂಚಿತವಾಗಿದೆ. ಕೂಲಿ ಕಾರ್ಮಿಕರು ಹೆಚ್ಚಾಗಿರುವ ಪ್ರದೇಶದಲ್ಲಿ ಪ್ರಥಮ ಚಿಕಿತ್ಸಾ ಕೇಂದ್ರದ ಆವಶ್ಯಕತೆಯಿದ್ದು, ಕುಡಿಯುವ ನೀರಿನ ಕೊಳವೆ ಬಾವಿಗಳ ದುರಸ್ತಿ, ಗ್ರಾಮದ ಮನೆಗಳಿಗೆ ಹಕ್ಕು ಪತ್ರ ವಿತರಣೆ ಮಾಡಿಲ್ಲ ಎಂದು ದೂರಿದ್ದಾರೆ.
ನಿರ್ಮಿತಿ ಕೇಂದ್ರದ ಕೆಬಾಗ ಅಂಗನ ವಾಡಿ ಕೇಂದ್ರ ಆವಶ್ಯಕತೆ ಇದೆ. ನಗರಸಭೆಯಿಂದ ನೀರು ಪೂರೈಸಲು ಮನೆ ಮನೆಗಳಿಗೆ ಸಂಪರ್ಕ ಕೊಡಲಾಗಿದೆ. ಹಲವಾರು ಮನೆಗಳಿಗೆ ವರ್ಕಿಂಗ್ ಆರ್ಡರ್ ಕಾಪಿ ಸಿಕ್ಕಿಲ್ಲ. ಗ್ರಾಮದ ಚರಂಡಿ ಸ್ವಚ್ಛತಾ ಕಾರ್ಯ ವಾಗಿಲ್ಲ. ನೀರು ಚರಂಡಿಯಲ್ಲಿ ನಿಂತು ಸೊಳ್ಳೆಗಳು ಹೆಚ್ಚಾಗಿ ಡೆಂಗ್, ಮಲೇರಿಯ, ಚಿಕುನ್ ಗುನ್ಯಾದಂತಹ ಮಾರಕ ಕಾಯಿಲೆಗಳು ಹರಡುತ್ತಿವೆ. ಈಗಾಗಲೇ 8ಮಂದಿಗೆ ಡೆಂಗ್, 6ಮಂದಿಗೆ ಚಿಕುನ್ ಗುನ್ಯಾ ಬಂದಿದ್ದು, ಸ್ಥಳೀಯರ ಜೀವನ ನರಕ ಯಾತನೆ ಅನುಭವಿಸುವಂತಾಗಿದೆ ಎಂದು ಆರೋಪಿಸಿದ್ದಾರೆ.
ಜೂ. 8ರಂದು ಕಲ್ಲುದೊಡ್ಡಿ ಶಾಂತಿ ನಗರ ನಗರಸಭಾ ಸದಸ್ಯೆ ಸುರೇಖಾ ಅವರ ಪತಿ ಸಂಪತ್‌ರಾಜ್‌ರವರಿಗೆ ಮನವಿ ಸಲ್ಲಿಸಲಾಗಿದೆ. ತುರ್ತಾಗಿ ನಾಳೆಯೇ ಇಡೀ ಗ್ರಾಮಕ್ಕೆ ಫಾಗಿಂಗ್ ಔಷಧಿ ಸಿಂಪಡಣೆ ಮಾಡಿಸುತ್ತೇನೆ. ನಿಮ್ಮ ಮೂಲಭೂತ ಸಮಸ್ಯೆಗೆ ಸ್ಪಂದಿಸುತ್ತೇನೆ ಎಂದು ಹೇಳಿದ್ದರೂ ಈತನಕ ಯಾವ ಕೆಲಸವು ಆಗಿಲ್ಲ. ಆದ್ದರಿಂದ ತಕ್ಷಣವೇ ಕ್ರಮ ಕೈಗೊಂಡು ಜನರ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕಲ್ಲುದೊಡ್ಡಿ ಗ್ರಾಮಸ್ಥರಾದ ಶಿವಾಜಿ ಸಂಘದ ಮುಖಂಡರಾದ ಎಂದು ರಾಜು.ಯು.ಆರ್, ಕೃಷ್ಣ, ಮಲ್ಲಿಕಾರ್ಜುನ, ಮೋಹಿತ್ ಸಿ.ಎಸ್, ಗಿರೀಶ್ ಎಚ್.ಟಿ, ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.







