ಹೆಜಮಾಡಿಯಲ್ಲಿ ಟೋಲ್‌ಸಂಗ್ರಹ: ಪ್ರತಿಭಟನೆಯ ಎಚ್ಚರಿಕೆ
ವಿವಿಧ ಬೇಡಿಕೆ ಈಡೇರಿಸಲು ಆಗ್ರಹ

ಪಡುಬಿದ್ರೆ, ಜೂ.15: ರಾಷ್ಟ್ರೀಯ ಹೆದ್ದಾರಿ 66 ರ ಹೆಜಮಾಡಿಯಲ್ಲಿ ನಿರ್ಮಾಣಗೊಂಡಿರುವ ಟೋಲ್‌ಗೇಟ್‌ನಿಂದ ಸಾರ್ವಜನಿಕರಿಗಾಗುವ ತೊಂದರೆಗಳನ್ನು ನಿವಾರಿಸಬೇಕು ಹಾಗೂ ವಿವಿಧ ಬೇಡಿಕೆಗಳನ್ನು ಶೀಘ್ರವಾಗಿ ಈಡೇರಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟವನ್ನು ನಡೆಸುವುದಾಗಿ ಹೆಜಮಾಡಿ ನಾಗರಿಕ ಸಮಿತಿ ಎಚ್ಚರಿಕೆ ನೀಡಿದೆ. ಹೆಜಮಾಡಿ ಗ್ರಾ.ಪಂ. ಸಭಾಂಗಣದಲ್ಲಿ ಮಂಗಳವಾರ ನಡೆದ ಸಮಿತಿಯ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ.
ಅಂಡರ್ ಪಾಸ್ ನಿರ್ಮಿಸಿ
ಈಗ ನಿರ್ಮಾಣವಾಗಿರುವ ಟೋಲ್‌ಗೇಟ್ ಸಮೀಪ ಗ್ರಾಮ ದೇವಸ್ಥಾನವಿದ್ದು, ಸುತ್ತಮುತ್ತ ನೂರಾರು ಮನೆಗಳು ಶಾಲೆಗಳಿವೆ. ಅಲ್ಲದೆ, ಇದೇ ದಾರಿಯಿಂದ ಪಲಿಮಾರು, ನಂದಿಕೂರು ಕಡೆಗೆ ತೆರಳಲು ಹತ್ತಿರದ ಸಂಪರ್ಕ ರಸ್ತೆಯಿದೆ. ನೂರಾರು ವಿದ್ಯಾರ್ಥಿಗಳು, ವಯೋವೃದ್ಧರು ದಿನನಿತ್ಯ ಈ ಮಾರ್ಗದಲ್ಲಿ ಸಂಚರಿಸುತ್ತಾರೆ. ಹಾಗಾಗಿ ಹೆಜಮಾಡಿ ಮೈದಾನದಿಂದ ದೇವಳಕ್ಕೆ ಹೋಗುವ ರಸ್ತೆಗೆ ಶೀಘ್ರವಾಗಿ ಅಂಡರ್ ಪಾಸ್ ನಿರ್ಮಿಸಿಕೊಡಬೇಕು ಎಂದು ಸಮಿತಿ ಆಗ್ರಹಿಸಿದೆ.
ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ, ಜಿಲ್ಲಾಡಳಿತಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದ್ದರೂ ಸಮಸ್ಯೆ ಪರಿಹರಿಸಿಲ್ಲ. ಅಂಡರ್‌ಪಾಸ್ ಬಗ್ಗೆ ಕೇವಲ ಭರವಸೆಯಷ್ಟೇ ದೊರಕಿತ್ತು. ಇದೀಗ ಗ್ರಾಮದ ಮೂಲಭೂತ ಸಮಸ್ಯೆಯನ್ನು ಆದ್ಯತೆ ಮೇರೆಗೆ ಬಗೆಹರಿಸಬೇಕೆಂದು ಸಮಿತಿ ಮನವಿ ಮಾಡಿದೆ.
ಕನ್ನಂಗಾರ್ ಬೈಪಾಸ್
ಪಡುಬಿದ್ರೆ ಕಡೆಯಿಂದ ಹೆಜಮಾಡಿ ಗ್ರಾಮಕ್ಕೆ ಹೆದ್ದಾರಿ ಮೂಲಕ ಆಗಮಿಸಲು ತೀವ್ರ ತೊಂದರೆಯಾಗುತ್ತಿದೆ. ಬೀಡಿನಕರೆ ಬಳಿಯ ಸುಜ್ಲಾನ್‌ಗಾಗಿ ನಿರ್ಮಿಸಿದ ವಿಭಜಕದಿಂದ ಹೆಜಮಾಡಿ ಬೈಪಾಸ್‌ವರೆಗೆ ಸರ್ವಿಸ್ ರಸ್ತೆ ನಿರ್ಮಿಸಬೇಕು. ಗ್ರಾಮದ ಜನರ ಈ ಪ್ರಾಮುಖ್ಯ ಬೇಡಿಕೆಗಳನ್ನು ಈಡೇರಿಸದೆ ಹೆಜಮಾಡಿಯಲ್ಲಿ ಯಾವುದೇ ಕಾರಣಕ್ಕೂ ಟೋಲ್‌ಸಂಗ್ರಹಕ್ಕೆ ಅವಕಾಶ ನೀಡಬಾರದು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಮಿತಿ ಪದಾಧಿಕಾರಿಗಳ ಆಯ್ಕೆ
ಹೆಜಮಾಡಿ ಗ್ರಾಮ ಪಂಚಾಯತ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಾಗರಿಕ ಸಮಿತಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಗುಲಾಂ ಮುಹಮ್ಮದ್, ಗೌರವಾಧ್ಯಕ್ಷರಾಗಿ ಶಂಕರ ಶೆಟ್ಟಿ, ಕಾರ್ಯಾಧ್ಯಕ್ಷರಾಗಿ ಸಚಿನ್ ಜಿ ನಾಯಕ್, ಪ್ರಧಾನ ಕಾರ್ಯದರ್ಶಿಯಾಗಿ ಶೇಖರ ಹೆಜಮಾಡಿ. ಹಾಗೂ 50ಕ್ಕೂ ಅಧಿಕ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಹೆಜಮಾಡಿಯ ಎಲ್ಲಾ ಸಂಸ್ಥೆ ಹಾಗೂ ವಿವಿಧ ಸಾಮಾಜಿಕ ಸಂಘಟನೆ, ಕ್ರೀಡಾ ಸಂಸ್ಥೆಗಳನ್ನು ಒಗ್ಗೂಡಿಸಿಕೊಂಡು ಬೃಹತ್ ಹೋರಾಟ ಹಮ್ಮಿಕೊಳ್ಳಲು ಸಮಿತಿ ನಿರ್ಧರಿಸಿತು.
ಹೆಜಮಾಡಿ ಗ್ರಾ.ಪಂ. ಅಧ್ಯಕ್ಷೆ ವಿಶಾಲಾಕ್ಷಿ ಪುತ್ರನ್, ಉಪಾಧ್ಯಕ್ಷ ಸುಧಾಕರ ಕರ್ಕೇರ, ತಾ.ಪಂ. ಸದಸ್ಯೆ ರೇಣುಕಾ ಪುತ್ರನ್ ಉಪಸ್ಥಿತರಿದ್ದರು.







