ರೋಹಿತ್ ವೇಮುಲ ದಲಿತ: ಖಚಿತ ಪಡಿಸಿದ ವರದಿ

ಹೈದರಾಬಾದ್,ಜೂ.15: ಈ ವರ್ಷದ ಜ.17ರಂದು ಹೈದರಾಬಾದ್ ವಿವಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಸಂಶೋಧನಾ ವಿದ್ಯಾರ್ಥಿ ರೋಹಿತ್ ವೇಮುಲ ಪರಿಶಿಷ್ಟ ಜಾತಿ ಸಮುದಾಯಕ್ಕೆ ಸೇರಿದ್ದ ಎನ್ನುವುದನ್ನು ವರದಿಯೊಂದು ಖಚಿತ ಪಡಿಸಿದ್ದು, ಗುಂಟೂರು ಜಿಲ್ಲಾಧಿಕಾರಿ ಕಾಂತಿಲಾಲ ದಾಂಡೆ ಅವರು ಈ ವರದಿಯನ್ನು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ಸಲ್ಲಿಸಿದ್ದಾರೆ.
ಗುಂಟೂರು ತಹಶೀಲ್ದಾರರ ಬಳಿ ಲಭ್ಯ ದಾಖಲೆಗಳಂತೆ ರೋಹಿತ್ ಚಕ್ರವರ್ತಿ ವೇಮುಲ ಅವರು ಆಂಧ್ರಪ್ರದೇಶದಲ್ಲಿ ಪರಿಶಿಷ್ಟ ಜಾತಿಯೆಂದು ವರ್ಗೀಕರಿಸಲಾಗಿರುವ ಹಿಂದು ಮಾಲಾ ಜಾತಿಗೆ ಸೇರಿದ್ದಾರೆ ಮತ್ತು ಅವರ ಕುಟುಂಬವು ಬಿಪಿಎಲ್ ಪಟ್ಟಿಯಲ್ಲಿದೆ. ರೋಹಿತ್ ಅವರ ಅಜ್ಜಿ ಮತ್ತು ಇತರರು ನೀಡಿರುವ ಹೇಳಿಕೆಗಳನ್ನು ಇದರೊಂದಿಗೆ ಲಗತ್ತಿಸಲಾಗಿದೆ ಎಂದು ವರದಿಯು ತಿಳಿಸಿದೆ.
ಕಾನೂನಿನಂತೆ ರೋಹಿತ್ ಅವರ ಗುರುತನ್ನು ಮೂರನೇ ವ್ಯಕ್ತಿಯು ಮರಣೋತ್ತರವಾಗಿ ಪ್ರಶ್ನಿಸಲಾಗದು ಎಂದು ವೇಮುಲ ಕುಟುಂಬದ ವಕೀಲ ಎಸ್.ಗುಣರತ್ನನ್ ತಿಳಿಸಿದರು. ರೋಹಿತ್ ಇತರ ಹಿಂದುಳಿದ ಜಾತಿಗಳಡಿ ವಡ್ಡೇರ ಜಾತಿಗೆ ಸೇರಿದವನು ಎಂದು ಆತನ ಸಾವಿನ ಬೆನ್ನಿಗೇ ತಂದೆ ಮಣಿ ಕುಮಾರ್ ಹೇಳಿಕೆ ನೀಡಿದ ಬಳಿಕ ವಿವಾದ ಸೃಷ್ಟಿಯಾಗಿತ್ತು.





