ಅಕ್ರಮ ಕಟ್ಟಡಗಳ ಸಕ್ರಮಕ್ಕೆ ರಾಜ್ಯ ಸರಕಾರ ಒಲವು
ಶಿವಮೊಗ್ಗ, ಜೂ. 15: ರಾಜ್ಯದ ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿನ ಸರಕಾರಿ ಜಾಗಗಳು, ಗೋಮಾಳಗಳು, ಪುರಸಭೆ, ಪಾಲಿಕೆಯ ನಿವೇಶನಗಳಲ್ಲಿ ಅನಧಿಕೃತವಾಗಿ ಬಹುದಿನಗಳಿಂದ ಮನೆ ಕಟ್ಟಿಕೊಂಡು ಹಕ್ಕುಪತ್ರಗಳಿಲ್ಲದೆ ಆತಂಕದಿಂದ ದಿನಕಳೆಯುತ್ತಿರುವ ಬಡಕುಟುಂಬಗಳು ಕರ್ನಾಟಕ ಭೂ ಕಂದಾಯ ಕಾಯ್ದೆ-1964 ಕಲಂ 94ಸಿಸಿ ಅಡಿಯಲ್ಲಿ ನಿಗದಿಪಡಿ ಸಿರುವ ಶುಲ್ಕ ಪಾವತಿಸಿ ಸಕ್ರಮ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕ ಕೆ.ಬಿ. ಪ್ರಸನ್ನಕುಮಾರ್ ಹೇಳಿದರು.
ಬು ವಾರ ನಗರದ ಉಪಭಾಗಾಧಿಕಾರಿಯವರ ಕೋರ್ಟ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಧ್ಯಮ ಪ್ರತಿನಿಧಿಗಳಿಗೆ ಮಾಹಿತಿ ನೀಡಿದ ಅವರು, ಈ ಯೋಜನೆಯಡಿ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸಲು ಇಚ್ಛಿಸುವವರು ತಮ್ಮ ಮನೆಗಳ ಛಾಯಾಚಿತ್ರ, ಪಡಿತರ ಚೀಟಿ ಮತ್ತಿತರ ದಾಖಲಾತಿಗಳೊಂದಿಗೆ ಅಟಲ್‌ಜೀ ಜನಸ್ನೇಹಿ ಕೇಂದ್ರದಲ್ಲಿ ಅರ್ಜಿ ಶುಲ್ಕ ರೂ.50 ಪಾವತಿಸಿ ಅರ್ಜಿ ಸಲ್ಲಿಸಬಹುದಾಗಿದೆ. ಬಳಿಕ ಆ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ, ನಗರಪಾಲಿಕೆ ವತಿಯಿಂದ ವಾರಸುದಾರರ ಹೆಸರಿಗೆ ಖಾತೆ ಮಾಡಿಸಲಾಗುವುದು ಎಂದವರು ನುಡಿದರು.
ಸರ್ವ ಪಕ್ಷಗಳ ಮುಖಂಡರ ಬಹುದಿನಗಳ ಒತ್ತಾಸೆಯ ಮೇರೆಗೆ ಪ್ರಸ್ತುತ ಘನ ಸರಕಾರವು ಜನಹಿತ ಯೋಜನೆಯೊಂದಕ್ಕೆ ಅವಕಾಶ ನೀಡಿದೆ ಎಂದ ಅವರು, ಕೊಳಚೆ ಪ್ರದೇಶದಲ್ಲಿ ವಾಸವಿದ್ದು, ಈವರೆಗೆ ಹಕ್ಕುಪತ್ರ ಪಡೆಯದಿರುವ ಫಲಾನುಭವಿಗಳಿಗೂ ಈ ಯೋಜನೆಯಡಿ ನಿವೇಶನ ನೀಡಲಾಗುವುದು ಎಂದರು. ಅಕ್ರಮ ಸಕ್ರಮಗೊಳಿಸಲು ಸಾರ್ವಜ ನಿಕರು ಯಾವುದೇ ಮಧ್ಯವರ್ತಿಗಳ ಸಹಾಯ ಪಡೆದುಕೊಳ್ಳದೆ, ಇಲಾಖೆ ಸೂಚಿಸಿದ ಅಗತ್ಯ ದಾಖಲೆಗಳೊಂದಿಗೆ ಅಟಲ್‌ಜೀ ಜನಸ್ನೇಹಿ ಕೇಂದ್ರಕ್ಕೆ ಭೇಟಿ ನೀಡಿ, ಪಾಲಿಕೆಗೆ ನಿಗದಿಪಡಿಸಿದ ಶುಲ್ಕ ಪಾವತಿಸಿ, ಖಾತೆ ಮಾಡಿಸಿ ೊಳ್ಳಬಹುದಾಗಿದೆ. ಈ ಕಾರ್ಯಕ್ಕಾಗಿ ಯಾವುದೇ ಅಧಿಕಾರಿಗಳಿಗೆ ಲಂಚ ನೀಡಬಾರದು ಎಂದ ಶಾಸಕರು, ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಲು ಆರಂಭದ ಹಂತವಾಗಿ ನಗರದ ತಾಲೂಕು ಕಚೇರಿಯ ಕೇಂದ್ರದಲ್ಲಿ ಕೌಂಟರ್ ತೆರೆಯಲಾಗಿದೆ. ಈ ಯೋಜನೆಯಿಂದ ಬಡವರ ಬದುಕಿಗೆ ನೆಲೆ ಸಿಗಲಿದೆ ಹಾಗೂ ಪಾಲಿಕೆಗೂ ಆದಾಯ ಬರಲಿದೆ ಎಂದು ಶಾಸಕ ಕೆ.ಬಿ. ಪ್ರಸನ್ನಕುಮಾರ್ ನುಡಿದರು. ಪತ್ರಿಕಾಗೋಷ್ಠಿಯಲ್ಲಿ ಉಪವಿಭಾಗಾಧಿಕಾರಿ ಎಚ್.ಟಿ. ಕೃಷ್ಣಮೂರ್ತಿ, ಮಹಾನಗರಪಾಲಿಕೆ ಆಯುಕ್ತೆ ಶ್ರೀಮತಿ ತುಷಾರಮಣಿ, ಮಹಾನಗರಪಾಲಿಕೆ ಸದಸ್ಯ ವಿಶ್ವನಾಥಕಾಶಿ, ತಹಶೀಲ್ದಾರ್ ಸತ್ಯನಾರಾಯಣ ಉಪಸ್ಥಿತರಿದ್ದರು.
ಪ
ರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಂಗವಿಕಲ, ಮಾಜಿ ಸೈನಿಕ ಹಾಗೂ ಪೌರಕಾರ್ಮಿಕರಿಗೆ ನಿವೇಶನದ ಸಬ್‌ರಿಜಿಸ್ಟ್ರಾರ್ ನಿಗದಿಪಡಿಸುವ ವೌಲ್ಯದ ಶೇ.6 ರಷ್ಟು ಹಾಗೂ ಇತರ ಜನಾಂಗದವರು ಶೇ. 12ರಷ್ಟು ಶುಲ್ಕ ಪಾವತಿ ಮಾಡಬೇಕಾಗುವುದು.
ನಗರದ ಪ್ರದೇಶದವರಿಗೆ 20x
30 ನಿವೇಶನ ಗ್ರಾಮೀಣ ಪ್ರದೇಶದವರಿಗೆ 50x80 ನಿವೇಶನ
ಅರ್ಜಿ ಸಲ್ಲಿಸಲು ಯಾವುದೇ ಆದಾಯ ಮಿತಿ ಇಲ್ಲ.
ಅರ್ಜಿ ಸಲ್ಲಿಸಲು ಅಕ್ಟೋಬರ್ 4 ಕೊನೆಯ ದಿನ. 2015ರ ಪೂರ್ವದ ಕಟ್ಟಡಗಳಿಗೂ ಅವಕಾಶ.







