ಚುಟುಕು ಸುದ್ದಿಗಳು
ಸಾಮೂಹಿಕ ಅತ್ಯಾಚಾರಗೈದ ಆರೋಪಿಗಳ ಬಂಧನ
ಉಳ್ಳಾಲ, ಜೂ. 15: ವಿಧವೆಯೋರ್ವಳ ಪರಿಚಯ ಬೆಳೆಸಿ ಅವಳನ್ನು ಮದುವೆ ಯಾಗುತ್ತೇನೆಂದು ನಂಬಿಸಿ ದೈಹಿಕ ಸಂಬಂಧ ಬೆಳೆಸಿದ್ದಲ್ಲದೆ, ತನ್ನ ಸ್ನೇಹಿತರಿಬ್ಬರಿಂದಲೂ ಬಲವಂತದ ಅತ್ಯಾಚಾರವೆಸಗಿಸಿದ ಆರೋಪದ ಮೇಲೆ ಕಾಸರಗೋಡು ಜಿಲ್ಲೆಯ ಉಪ್ಪಳದ ಬಾವುಚ್ಚ(41)ಮತ್ತು ಆತನ ಸ್ನೇಹಿತರಾದ ಸಫಾ ಮೂಸ ಮತ್ತು ಸಫಾ ಜಲೀಲ್ ಎಂಬವರನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಘಟನೆ ವಿವರ: 2015ರ ಫೆಬ್ರವರಿಯಲ್ಲಿ ಅಡ್ಯಾರ್ ಗ್ರಾಮದ ವಿಧವೆ ಮಹಿಳೆ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿದ್ದ ಸಂದರ್ಭ ಚಿಕ್ಕ ಮಗಳೂರು ಮೂದ ಮಹಿಳೆಯ ಪರಿಚಯವಾಗಿತ್ತು. ಆಕೆ ವಿಧವೆ ಮಹಿಳೆಗೆ ಉಪ್ಪಳದ ಬಾವುಚ್ಚನನ್ನು ಪರಿಚಯಿಸಿದ್ದಾಳೆ. ಅವನು ವಿಧವೆಯೊಂದಿಗೆ ಸಲುಗೆ ಯಿಂದಿದ್ದು ಮದುವೆಯಾಗುತ್ತೇನೆಂದು ನಂಬಿಸಿ ಉಪ್ಪಳ ಸೇರಿ ಅನೇಕ ಲಾಡ್ಜ್‌ಗಳಲ್ಲಿ ದೈಹಿಕ ಸಂಪರ್ಕ ನಡೆಸಿದ್ದನೆನ್ನಲಾಗಿದೆ. ನಂತರ ಆಕೆಯನ್ನು ಉಪ್ಪಳದ ತನ್ನ ಸ್ನೇಹಿತರಾದ ಸಫಾ ಮೂಸ ಮತ್ತು ಸಫಾ ಜಲೀಲ್ ಎಂಬವರಿಗೆ ಪರಿಚಯಿಸಿದ್ದಾನೆ. ಸ್ನೇಹಿತರಿಬ್ಬರು ಸಫಾ ಮೂಸನ ಮನೆ ಮತ್ತು ಲಾಡ್ಜ್‌ಗಳಲ್ಲಿ ಬಲವಂತದ ಅತ್ಯಾಚಾರವೆಸಗಿದ್ದರೆನ್ನಲಾಗಿದ್ದು ಇದರಿಂದ ಬೇಸತ್ತ ಮಹಿಳೆ ಕಳೆದ ಜೂನ್ 13 ರಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಕೇಸು ದಾಖಲಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಉಳ್ಳಾಲ ಪೊಲೀಸರು ಉಪ್ಪಳಕ್ಕೆ ತೆರಳಿ ಆರೋಪಿಗಳನ್ನು ಬಂಧಿಸಿದ್ದಾರೆ.
ಠಾಣೆಯಿಂದ ಪರಾರಿಯಾದ ಆರೋಪಿ ಸೆರೆ
ಮಂಜೇಶ್ವರ, ಜೂ. 15: ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದ ಅಕ್ರಮ ಪ್ರಕರಣವೊಂದರ ಆರೋಪಿಯನ್ನು ಪೊಲೀಸರು ಮತ್ತೆ ಸೆರೆ ಹಿಡಿದಿದ್ದಾರೆ.
ಪೆರುವಾಡ್ ಫಿಷರೀಶ್ ಕಾಲನಿಯ ಮುಹಮ್ಮದ್ ಹನೀಫ್(26) ಸೆರೆಯಾದ ಆರೋಪಿ. ಮಂಗಳವಾರ ಆರೋಪಿ ಕುಂಬಳೆ ಠಾಣೆಯಿಂದ ಪೊಲೀಸರಿಂದ ತಪ್ಪಿಸಿ ಪರಾರಿಯಾಗಿದ್ದನು. ಬಳಿಕ ಆತನನ್ನು ಕೊಯಿಪ್ಪಾಡಿ ಕಡಪ್ಪುರ ಪರಿಸರದಲ್ಲಿ ಪೊಲೀಸರು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಮತ ಎಣಿಕೆಯ ದಿನದಂದು ಅಡಿಷನಲ್ ಎಸ್ಸೈ ಬಾಬು ಹಾಗೂ ಥೋಮಸ್‌ರನ್ನು ಕಲ್ಲೆಸೆದು ಗಾಯಗೊಳಿಸಿದ ಪ್ರಕರಣದಲ್ಲಿ ಹನೀಫ್ ಆರೋಪಿಯಾಗಿದ್ದಾನೆ.
ಹೊಳೆಯಲ್ಲಿ ಮುಳುಗಿ ಮೃತ್ಯು
ಕಾಪು, ಜೂ. 15: ಉದ್ಯಾವರ ಕಂಬಳಕಟ್ಟೆ ಅಡ್ಡಹೊಳೆಯಲ್ಲಿ ಮೀನು ಹಿಡಿಯುತ್ತಿದ್ದ ವ್ಯಕ್ತಿಯೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬುಧವಾರ ನಡೆದಿದೆ.
ಮೃತರನ್ನು ಕೋಟೆ ಗ್ರಾಮದ ಸುಧೀರ್ ಎಂದು ಗುರುತಿಸಲಾಗಿದೆ. ಇವರು ಹೊಳೆಯಲ್ಲಿ ಮೀನು ಹಿಡಿಯುವಾಗ ಒಮ್ಮೆಲೆ ಮಳೆ ನೀರು ಬಂದು ಸುಧೀರ್ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೈಕ್ ಢಿಕ್ಕಿ: ಸೈಕಲ್ ಸವಾರ ಮೃತ್ಯು
ಬೈಂದೂರು, ಜೂ.15: ಬೈಕೊಂದು ರಸ್ತೆ ಬದಿಯಲ್ಲಿ ಹೋಗುತ್ತಿದ್ದ ಸೈಕಲ್‌ಗೆ ಢಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಮೃತಪಟ್ಟ ಘಟನೆ ಜೂ.14ರಂದು ರಾತ್ರಿ ಉಪ್ಪುಂದ ಗ್ರಾಮದ ಶಾಲೆಬಾಗಿಲು ರಸ್ತೆಯ ಗುರುಕೃಪಾ ಹೊಟೇಲ್ ಬಳಿ ನಡೆದಿದೆ.
ಚಂದ್ರ ಖಾರ್ವಿ ಇವರು ರಾತ್ರಿ 8:30ಕ್ಕೆೆ ಉಪ್ಪುಂದ ಕಡೆಯಿಂದ ಸೈಕಲ್ಲಿನಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ಬಂದ ಬೈಕ್ ಎದುರಿನಲ್ಲಿದ್ದ ಕಾರನ್ನು ಹಿಂದಿಕ್ಕುವ ಭರದಲ್ಲಿ ರಸ್ತೆ ಬದಿಗೆ ಬಂದು ಸೈಕಲ್‌ಗೆ ಢಿಕ್ಕಿ ಹೊಡೆಯಿತು. ಇದರಿಂದ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಚಂದ್ರ ಖಾರ್ವಿ ರಾತ್ರಿ 10:30ಕ್ಕೆೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟರು. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮ ಮರಳು ಸಾಗಾಟ: ಲಾರಿ ವಶಕ್ಕೆ
ಮಂಗಳೂರು, ಜೂ. 15: ಪರವಾನಿಗೆ ಇಲ್ಲದೆ ಮರಳು ಸಾಗಾಟ ಮಾಡುತ್ತಿದ್ದ ಟಿಪ್ಪರ್‌ನ್ನು ಅರ್ಕುಳ ಬಳಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಮೂರ್ತಿ ವಶಕ್ಕೆ ಪಡೆದಿದ್ದಾರೆ.
ಅರ್ಕುಳದಲ್ಲಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ ಟಿಪ್ಪರ್‌ನ್ನು ತಡೆದು ನಿಲ್ಲಿಸಿದಾಗ ಯಾವುದೇ ಪರವಾನಿಗೆ ಇಲ್ಲದೆ ಮರಳುಸಾಗಾಟ ಮಾಡುತ್ತಿದ್ದ ವಿಟ್ಲದ ಇಸ್ಮಾಯೀಲ್‌ನನ್ನು ವಶಕ್ಕೆ ಪಡೆದು ಮರಳು ಸಹಿತ ಲಾರಿ ಯನ್ನು ಸ್ವಾಧೀ ಪಡಿಸಿ ಪ್ರಕರಣ ದಾಖಲಿಸಲಾಗಿದೆ.
ವಿಷಪೂರಿತ ಹಾವು ಕಚ್ಚಿ ಎಮ್ಮೆ ಸಾವು
ಮಂಜೇಶ್ವರ, ಜೂ. 15: ಹಾವು ಕಚ್ಚಿ ಎಮ್ಮೆಯೊಂದು ಸಾವನ್ನಪ್ಪಿದ ಘಟನೆ ಬದಿಯಡ್ಕ ಸಮೀಪ ಚರ್ಲಡ್ಕ ಉಳ್ಳೋಡಿಯಲ್ಲಿ ನಡೆದಿದೆ. ಚರ್ಲಡ್ಕ ಉಳ್ಳೋಡಿಯ ರಹೀಂ ಎಂಬವರ ಮಾಲಕತ್ವದಲ್ಲಿರುವ ಫಾರಂವೊಂದರ ಎಮ್ಮೆಯನ್ನು ಮಂಗಳವಾರ ಫಾರಂನ ಹೊರತಂದು ಹಿತ್ತಲಿನಲ್ಲಿ ಕಟ್ಟಿ ಹಾಕಲಾಗಿತ್ತು. ಮಧ್ಯಾಹ್ನ ಎಮ್ಮೆಗೆ ಆಹಾರ ನೀಡಲೆಂದು ಹೋದಾಗಎಮ್ಮೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಸಹೋದರರಿಗೆ ಚೂರಿ ಇರಿತ ಪ್ರಕರಣ: ಬೆಂಗಳೂರಿನಲ್ಲಿ ಆರೋಪಿಗಳ ಬಂಧನ
ಪುತ್ತೂರು, ಜೂ. 15 : ಪುತ್ತೂರು ನಗರದಲ್ಲಿ ವಾರದ ಹಿಂದೆ ನಡೆದಿದ್ದ ಚೂರಿ ಇರಿತ ಪ್ರಕರಣದ ಮೂವರು ಆರೋಪಿಗಳನ್ನು ಪುತ್ತೂರು ನಗರ ಪೊಲೀಸರು ಬುಧವಾರ ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಪುತ್ತೂರು ನಗರ ಪರಿಸರದ ಹರಿಪ್ರಸಾದ್ ಶೆಟ್ಟಿ, ಶರತ್ ಆಳ್ವ, ಪ್ರತಿನ್ ಬಂಧಿತ ಆರೋಪಿಗಳು.
ಪುತ್ತೂರು ತಾಲೂಕಿನ ಸಂಪ್ಯ ನಿವಾಸಿಗಳಾದ ರವಿಚಂದ್ರ ಹಾಗೂ ಗಣೇಶ್ ಎಂಬ ಸಹೋದರರಿಗೆ ಆರೋಪಿಗಳು ಕಳೆದ ಜೂ.6ರಂದು ರಾತ್ರಿ ಪುತ್ತೂರು ನಗರದ ಮುಖ್ಯ ರಸ್ತೆಯಲ್ಲಿರುವ ಮೊಬೈಲ್ ಅಂಗಡಿ ಬಳಿ ಚೂರಿಯಿಂದ ಇರಿದು ಪರಾರಿಯಾಗಿದ್ದರು. ಹಣಕಾಸಿನ ವಿವಾದ ಈ ಘಟನೆಗೆ ಕಾರಣ ಎನ್ನಲಾಗಿತ್ತು. ಘಟನೆ ಬಳಿಕ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದರು. ಪ್ರಕರಣ ದಾಖಲಿಸಿಕೊಂಡ ಪುತ್ತೂರು ನಗರ ಪೊಲೀಸರು ಆರೋಪಿಗಳನ್ನು ಬುಧವಾರ ಬೆಂಗಳೂರಿನ ತಿಲಕ್‌ನಗರದಲ್ಲಿ ಪತ್ತೆಮಾಡಿ ಬಂಧಿಸಿದ್ದಾರೆ.







