ರಾಜ್ಯದಲ್ಲಿ ಇ-ಸಿಗರೆಟ್ ನಿಷೇಧ: ಖಾದರ್

ಬೆಂಗಳೂರು, ಜೂ.15: ರಾಜ್ಯದಲ್ಲಿ ನಿಕೋಟಿನ್ ಕಾರ್ಟ್ರಿಡ್ಜ್‌ಗಳನ್ನು ಒಳಗೊಂಡ ಇ-ಸಿಗರೆಟ್ ಮಾರಾಟಕ್ಕೆ ಇಂದಿನಿಂದಲೇ ನಿಷೇಧ ಹೇರಲಾಗಿದ್ದು, ಯಾರಾದರೂ ಈ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವುದು ಕಂಡುಬಂದರೆ ಸಾರ್ವಜನಿಕರು 104 ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇಲೆಕ್ಟ್ರಾನಿಕ್ ಸಿಗರೆಟ್ ಉತ್ಪಾದನೆ, ವಿತರಣೆ, ಮಾರಾಟ, ಆಮದು ಹಾಗೂ ಜಾಹೀರಾತು ನೀಡುವುದಕ್ಕೂ ನಿಷೇಧ ಹೇರಲಾಗಿದೆ. ಹರ್ಯಾಣ ಹಾಗೂ ಪಂಜಾಬ್‌ಗಳಲ್ಲೂ ಇ-ಸಿಗರೆಟ್‌ಗಳನ್ನು ನಿಷೇಧಿಸಲಾಗಿದೆ ಎಂದರು.
ರಾಜ್ಯದಲ್ಲಿ ಇ-ಸಿಗರೆಟ್ ಬಳಕೆಗೆ ಅವಕಾಶ ಇಲ್ಲದಿದ್ದರೂ ಕಾನೂನು ಬಾಹಿರವಾಗಿ ಮಾರಾಟ ಮಾಡಲಾಗುತ್ತಿದೆ. ಅಂತರ್ಜಾಲದ ಮೂಲಕವೂ ಇದನ್ನು ಮಾರಾಟ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಆದುದರಿಂದ, ಸರಕಾರ ಇ-ಸಿಗರೆಟ್ ಮೇಲೆ ನಿಷೇಧ ಹೇರಿದೆ ಎಂದು ಖಾದರ್ ತಿಳಿಸಿದರು.
ಆನ್‌ಲೈನ್ ಮೂಲಕ ಯಾರಾದರೂ ಇ-ಸಿಗರೆಟ್‌ಗಳ ಮಾರಾಟಕ್ಕೆ ಪ್ರಯತ್ನ ಪಟ್ಟರೆ ಸೈಬರ್‌ಕ್ರೈಂ ವಿಭಾಗದ ಪೊಲೀಸರ ನೆರವಿನೊಂದಿಗೆ ಅಂತಹ ವೆಬ್‌ಸೈಟ್ ಗಳನ್ನು ನಿಷೇಧಿಸಲಾಗುವುದು. ಇ-ಸಿಗರೆಟ್ ನಿಷೇಧಕ್ಕೆ ಸಂಬಂಧಿಸಿದ ಸರಕಾರಿ ಆದೇಶವು ಇಂದಿನಿಂದಲೇ ಅನ್ವಯಿಸಲಿದೆ ಎಂದು ಖಾದರ್ ಹೇಳಿದರು.
ಈ ಉತ್ಪನ್ನಗಳನ್ನು ಮಾರಾಟ ಮಾಡುವುದು ಕಂಡುಬಂದಲ್ಲಿ ಆಹಾರ ಸುರಕ್ಷತಾ ಕಾಯ್ದೆ ಮತ್ತು ಔಷಧ ನಿಯಂತ್ರಣ ಕಾಯ್ದೆಯಡಿ ಕ್ರಿಮಿನಲ್ ಪ್ರಕರಣ ದಾಖಲಿಸ ಲಾಗುವುದು. ಆರೋಪ ಸಾಬೀತಾದಲ್ಲಿ ಐದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಅವರು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಎಲ್ಲ ರೀತಿಯ ಬೀಡಿ, ಸಿಗರೆಟ್ ನಿಷೇಧಕ್ಕೂ ಚಿಂತನೆ ನಡೆಸಲಾಗಿದ್ದು, ಈ ಸಂಬಂಧ ಆರೋಗ್ಯ, ಕಾನೂನು, ಗೃಹ ಇಲಾಖೆ ಜೊತೆ ಮುಖ್ಯಮಂತ್ರಿ ಚರ್ಚೆ ನಡೆಸಿದ್ದಾರೆ. ಇದರ ಸಾಧಕ, ಬಾಧಕಗಳ ಬಗ್ಗೆ ವರದಿ ನೀಡುವಂತೆ ಕಾನೂನು ಸಚಿವ ಜಯಚಂದ್ರ ಬಳಿ ವರದಿ ಕೇಳಿದ್ದಾರೆ ಎಂದು ಅವರು ಹೇಳಿದರು.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006 ಹಾಗೂ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಮಾರಾಟ ನಿಷೇಧ ಮತ್ತು ನಿರ್ಬಂಧ) ನಿಯಂತ್ರಣ ನೀತಿ-2011ರ ಅನ್ವಯ ನಿಕೋಟಿನ್ ಸೇವನೆ ನಿಷೇಧಿಸಲಾಗಿದೆ. ಅಲ್ಲದೆ, ಔಷಧ ಮತ್ತು ಸೌಂದರ್ಯವರ್ಧಕ ಕಾಯ್ದೆ 1940ರ ಪ್ರಕಾರ ನಿಕೋಟಿನ್ ಪದಾರ್ಥವನ್ನು ನಿಯಂತ್ರಿತ ಪ್ರಮಾಣದಲ್ಲಿ ಔಷಧ ಉಪಯೋಗಕ್ಕೆ ಮಾತ್ರ ಬಳಸಲು ಅವಕಾಶವಿದ್ದು, ಬೇರೆ ಯಾವುದೇ ಉದ್ದೇಶಕ್ಕೆ ಬಳಸಲು ಅವಕಾಶವಿಲ್ಲ ಎಂದು ಖಾದರ್ ಮಾಹಿತಿ ನೀಡಿದರು.
ಪ್ಲಾಸ್ಟಿಕ್ ಮತ್ತು ಲೋಹದಿಂದ ತಯಾರಿಸಿರುವ ಇ-ಸಿಗರೆಟ್‌ಗಳಲ್ಲಿ ರಾಸಾಯನಿಕ ಪದಾರ್ಥಗಳಾದ ಪ್ರೊಪಿಲೇನ್ ಗ್ಲೈಕೋಲ್ ಅಥವಾ ಗ್ಲಿಸೆರಿನ್ ಅನ್ನು ನಿಷೇಧಿತ ನಿಕೋಟಿನ್‌ನೊಂದಿಗೆ ಮಿಶ್ರಣ ಮಾಡಿರುವ ಕಾರ್ಟ್ರಿಡ್ಜ್‌ನ್ನು ಇಲೆಕ್ಟ್ರಿಕಲ್ ಚಾರ್ಜರ್ ಮೂಲಕ ಉಷ್ಣತೆ ಹೆಚ್ಚಿಸಿ ಹೊಗೆ ಯನ್ನು ಶ್ವಾಸಕೋಶದ ಮೂಲಕ ಸೇವಿಸಲಾಗುತ್ತದೆ ಎಂದು ಅವರು ಹೇಳಿದರು.
ಬ್ಯೂಟಿ ಕ್ಲಿನಿಕ್‌ಗಳ ಪರವಾನಿಗೆ ಕಡ್ಡಾಯ
ರಾಜ್ಯದಲ್ಲಿ ಬ್ಯೂಟಿ ಕ್ಲಿನಿಕ್‌ಗಳ ನಿಯಂತ್ರಣಕ್ಕೆ ಪ್ರತ್ಯೇಕ ನೀತಿ ರೂಪಿಸಲಾಗುತ್ತಿದ್ದು, ಇನ್ನು ಮೂರು ತಿಂಗಳಲ್ಲಿ ಈ ನೀತಿ ಜಾರಿಗೆ ಬರಲಿದೆ. ಹೊಸ ನೀತಿ ಅನ್ವಯ ಬ್ಯೂಟಿ ಕ್ಲಿನಿಕ್‌ಗಳು ‘ಕರ್ನಾಟಕ ಪ್ರಿವೆಂಟಿವ್ ಮೆಡಿಕಲ್ ಎಸ್ಟಾಬ್ಲಿಷ್‌ಮೆಂಟ್ (ಕೆಪಿಎಂಇ) ಕಾಯ್ದೆಯಡಿ ಪರವಾನಿಗೆ ಪಡೆಯುವುದು ಕಡ್ಡಾಯ’ವಾಗಲಿದೆ. ಬ್ಯೂಟಿ ಕ್ಲಿನಿಕ್‌ಗಳಲ್ಲಿ ಕೂದಲು ಕಸಿ, ಚರ್ಮರೋಗಕ್ಕೆ ಚಿಕಿತ್ಸೆ ನೀಡಲು ಕೆಪಿಎಂಇ ಕಾಯ್ದೆಯಡಿ ಅನುಮತಿ ಪಡೆಯಬೇಕು ಮತ್ತು ಅಲ್ಲಿ ಡರ್ಮೆಟಾಲಜಿಸ್ಟ್‌ಗಳು ಕಡ್ಡಾಯವಾಗಿ ಇರಬೇಕು.
-ಯು.ಟಿ.ಖಾದರ್, ಆರೋಗ್ಯ ಸಚಿವ







